ಇಟಲಿಯ ಇತಿಹಾಸ

ಪ್ರಾಕ್ತನ : ರೋಮ್ ಸಾಮ್ರಾಜ್ಯದ ಹಲವಾರು ಅವಶೇಷಗಳು ಇಟಲಿಯಲ್ಲಿ ವಿಪುಲವಾಗಿ ಸಿಕ್ಕುತ್ತದೆ. ಕ್ರಿ.ಶ. 14ನೆಯ ಶತಮಾನದಿಂದಲೇ ಅಲ್ಲಿನ ಕಲಾವಿದರು ಮತ್ತು ಕಲಾವಸ್ತು ಸಂಗ್ರಾಹಕರು ಅಲ್ಲಲ್ಲಿ ಕಂಡುಬರುತ್ತಿದ್ದ ರೋಮನ್ನರ ಕಾಲದ ಕಂಚಿನ ಮತ್ತು ಅಮೃತಶಿಲೆಯ ವಿಗ್ರಹಗಳನ್ನು ಸಂಗ್ರಹಿಸುತ್ತಿದ್ದರು. ಕ್ರಿ.ಶ. 17-18ನೆಯ ಶತಮಾನದಲ್ಲಿ ಹಲವು ಕಲಾವಸ್ತು ಸಂಗ್ರಾಹಕರು ಇವುಗಳಿಗಾಗಿ ಪುರಾತನ ಪಟ್ಟಣಗಳಲ್ಲಿ ಉತ್ಖನನಗಳನ್ನು ನಡೆಸಿದರು. ಇಲ್ಲಿ ಹಲವಾರು ಲ್ಯಾಟಿನ್ ಶಾಸನಗಳು ಸಿಕ್ಕಿದುವು. ಪುರಾತನ ಕಾಲದ ನಾಗರಿಕತೆಗಳ ಬಗ್ಗೆ ಜನರ ಆಸಕ್ತಿ ಬೆಳೆಯಿತು. ಈ ರೀತಿಯಲ್ಲಿ ಇಟಲಿಯ ಕಲಾವಸ್ತು ಸಂಗ್ರಾಹಕರ ನಿಮಿತ್ತದಿಂದ ಪ್ರಾಚೀನ ಸಂಸ್ಕøತಿಗಳ ಬಗ್ಗೆ ಆರಂಭವಾದ ಕುತೂಹಲ ಇಂದಿನ ಪುರಾತತ್ತ್ವ ಶಾಸ್ತ್ರದ ಬೆಳವಣಿಗೆಗೆ ನಾಂದಿಯಾಯಿತು. 18ನೆಯ ಶತಮಾನದ ಕೊನೆಯ ಹೊತ್ತಿಗೆ ಇಲ್ಲಿನ ಪುರಾತನ ಸಂಸ್ಕøತಿಗಳ ಅಧ್ಯಯನಕ್ಕಾಗಿ ಸರ್ಕಾರವೂ ಕ್ರೈಸ್ತಪಂಥದ ಗುರುಪೀಠವೂ ಹಲವಾರು ಪ್ರಾಚೀನ ನಿವೇಶನಗಳ ಉತ್ಖನನ ಹಾಗೂ ಸಂರಕ್ಷಣೆಗೆ ಸಹಾಯಮಾಡಿದುವು. ಸರ್ಕಾರವೂ ಹಲವು ದೇಶಗಳ ವಿದ್ಯಾಸಂಸ್ಥೆಗಳೂ ಇಟಲಿಯ ಪುರಾತತ್ತ್ವ ಅಧ್ಯಯನದಲ್ಲಿ ಇಂದಿಗೂ ನಿರತವಾಗಿವೆ. 
ಯೂರೋಪಿನ ಪ್ರಾಚೀನ ಶಿಲಾಯುಗದ ಪೂರ್ವ ಮತ್ತು ಮಧ್ಯಕಾಲದ ಕುರುಹುಗಳು ಇಟಲಿ ಪರ್ಯಾಯದ್ವೀಪದ ಕೆಲವು ಸ್ಥಳಗಳಲ್ಲಿ ಕಂಡುಬಂದಿವೆ. ಉತ್ತರ ಪ್ರಾಚೀನ ಶಿಲಾಯುಗದ (ಅಪ್ಪರ್ ಪೇಲಿಯೊಲಿಥಿಕ್) ಅವಶೇಷಗಳೂ ಇವುಗಳ ಕರ್ತೃಗಳಾದ ಕ್ರೋಮ್ಯಾಗ್ನನ್, ಗ್ರಿಮಾಲ್ಡಿ ರೀತಿಯ ಜನರ ದೈಹಿಕ ಉಳಿಕೆಗಳೂ ಇಟಲಿಯ ಪರ್ಯಾಯದ್ವೀಪದಲ್ಲಲ್ಲದೆ ಸಾರ್ಡೀನಿಯ ಮತ್ತು ಸಿಸಿಲಿ ದ್ವೀಪಗಳಲ್ಲೂ ಇದ್ದದ್ದು ಕಂಡುಬಂದಿದೆ.

ಇಲ್ಲಿನ ನೂತನ ಶಿಲಾಯುಗದ ಕಾಲದಲ್ಲಿ ಮಡಕೆಗಳೂ ಹಲವು ಬಗೆಯ ಕಲೆಗಳೂ ಪ್ರಚಲಿತವಾಗಿದ್ದುವು. ಈ ಕಾಲದಲ್ಲಿ ಮೆಡಿಟರೇನಿಯನ್ ಗುಂಪಿಗೆ ಸೇರಿದ ಲಿಗೂರಿಯನ್ ಜನ ಇಲ್ಲಿ ಪಸರಿಸಿದ್ದರು. ಸ್ವಲ್ಪಕಾಲದ ಅನಂತರ ತಾಮ್ರ ಲೋಹ ಬಳಕೆಗೆ ಬಂತು. ಈ ಕಾಲದಲ್ಲಿ ಕಲ್ಲು, ತಾಮ್ರ ಮತ್ತು ಎಲುಬಿನಿಂದ ತಯಾರಿಸಿದ ವಸ್ತುಗಳಲ್ಲದೆ ಉತ್ತಮರೀತಿಯ ಚಿತ್ರಿತ ಮಡಕೆಗಳೂ ಬಳಕೆಯಲ್ಲಿದ್ದುವು. ಸರೋವರಗಳಲ್ಲಿ ಕಂಬಗಳನ್ನು ನೆಟ್ಟು ಮೇಲೆ ಮನೆ ಕಟ್ಟುವ ಪದ್ದತಿ ಅನೇಕ ಕಡೆ ರೂಢಿಯಲ್ಲಿತ್ತು. ಜೌಗುನೆಲದಲ್ಲೂ ಈ ಜನ ಸುಮಾರು ಇದೇ ರೀತಿಯಲ್ಲಿ ಗ್ರಾಮ ನಿರ್ಮಾಣಮಾಡಿದ್ದರು. ವ್ಯವಸಾಯ ಈ ಕಾಲದ ಮುಖ್ಯ ಕಸುಬು. ವ್ಯಾಪಾರ ಮತ್ತು ಗಣಿ ಕೆಲಸವೂ ವ್ಯವಸ್ಥಿತವಾಗಿತ್ತು. ಈ ಜನ ಮೃತರನ್ನು ಸುಡುತ್ತಿದ್ದರು. ಇವರು ನೂತನ ಶಿಲಾಯುಗದ ಜನಾಂಗಕ್ಕೇ ಸೇರಿದವರೆಂದು ಹಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರಾದರೂ ಇವರು ಹೊಸದಾಗಿ ಇಲ್ಲಿಗೆ ವಲಸೆ ಬಂದು ಆರ್ಯಭಾಷೆಯನ್ನಾಡುತ್ತಿದ್ದ ಜನರೆಂದು ಇನ್ನು ಕೆಲವು ವಿದ್ವಾಂಸರು ಊಹಿಸುತ್ತಾರೆ. 

ಕ್ರಿ.ಪೂ. ಸು. 1000 ದಿಂದ 600ರ ವರೆಗೆ ವಿಲ್ಲನೋವ ಎಂಬ ಕಬ್ಬಿಣಯುಗದ ಸಂಸ್ಕøತಿ ಇಲ್ಲಿ ಪ್ರಚಲಿತವಾಗಿತ್ತು. ಈ ಕಾಲದ ಕುರುಹುಗಳು ಎಮಿಲಿಯ, ಟಸ್ಕನಿ ಮತ್ತು ಲುಂಬ್ರಿಯ ಪ್ರದೇಶಗಳಲ್ಲಿ ವಿಶೇಷವಾಗಿ ಕಂಡುಬಂದಿವೆ. ಎಲ್ಲ ನೋವ ಸಂಸ್ಕøತಿಯ ಜನ ಆಲ್ಪ್ಸ್ ಪರ್ವತ ಪ್ರದೇಶದಿಂದ ವಲಸೆಬಂದವರಿರಬಹುದೆಂದೂ ಪ್ರಾಯಶಃ ಇಟಾಲಿಕ್ ಭಾಷೆಗಳನ್ನಾಡುತ್ತಿದ್ದರೆಂದೂ ಹಲವು ವಿದ್ವಾಂಸರ ಅಭಿಪ್ರಾಯ.

ಕ್ರಿ.ಪೂ. 10ರಿಂದ 8ನೆಯ ಶತಮಾನದ ವರೆಗಿನ ಕಾಲದಲ್ಲಿ ಏಷ್ಯ ಮೈನರ್ ಪ್ರದೇಶದಿಂದ ಇಟಲಿಯ ತೀರಪ್ರದೇಶಗಳಿಗೆ ಇಟ್ರಸ್ಕನ್ ಜನ ವಲಸೆ ಬಂದು ಕ್ರಮೇಣ ದೇಶದ ಇತರ ಭಾಗಗಳಲ್ಲಿ ಹರಡಿ ತಮ್ಮದೇ ಆದ ವಿಶಿಷ್ಟ ಸಂಸ್ಕøತಿಯೊಂದನ್ನು ಬೆಳೆಸಿದರು. ಕ್ರಿ.ಪೂ. 9-8ನೆಯ ಶತಮಾನಗಳ ಹೊತ್ತಿಗೆ ಪೋನೀಷಿಯನ್ ಮತ್ತು ಗ್ರೀಕ್ ವಸಾಹತುಗಳೂ ಇಟಲಿಯ ಕರಾವಳಿಯಲ್ಲಿ ಸ್ಥಾಪಿತವಾಗಿದ್ದುವು. ಇದರಿಂದ ಕ್ರಿ.ಪೂ. 7ನೆಯ ಶತಮಾನದ ಹೊತ್ತಿಗೆ ಇಟಲಿಯ ಬಹುಭಾಗದಲ್ಲಿ ಗ್ರೀಕ್-ಇಟ್ರಸ್ಕನ್ ಸಂಸ್ಕøತಿ ಪ್ರಚಲಿತವಾಗಿದ್ದಿತು. ಕ್ರಿ.ಪೂ. 5ನೆಯ ಶತಮಾನದಲ್ಲಿ ಆಲ್ಪ್ಸ್ ಪರ್ವತ ಪ್ರದೇಶದಿಂದ ದಾಳಿ ಮಾಡಿದ ಗಾಲ್ ಜನ ಕ್ರಮೇಣ ದೇಶದ ಇತರೆಡೆಗಳಲ್ಲೂ ಹರಡಿದರು. ಕ್ರಿ.ಪೂ. 5-4ನೆಯ ಶತಮಾನಗಳಲ್ಲಿ ರೋಮ್ ಪಟ್ಟಣದ ಪ್ರಾಧಾನ್ಯ ಬೆಳೆಯಿತು. ಮುಂದೆ ಇಟಲಿಯ ರಾಜಕೀಯ ಏಕೀಕರಣ (ಪೊಲಿಟಿಕಲ್ ಯೂನಿಫಿಕೇಷನ್) ಆಯಿತು. ವಿಶಿಷ್ಟ ರೋಮನ್ ಸಂಸ್ಕøತಿ ಬೆಳೆಯಿತು. 	(ಎಸ್.ಎನ್.)

ಮಧ್ಯಯುಗದಲ್ಲಿ : ರೋಮ್ ಚಕ್ರಾಧಿಪತ್ಯದ ಪತನಾನಂತರ ಇಟಲಿಯ ಇತಿಹಾಸ ಉತ್ತರದಿಂದ ದೇಶವನ್ನು ಆಕ್ರಮಿಸಿಕೊಂಡು ಬಂದ ಅನಾಗರಿಕ ಜನಾಂಗಗಳ ಚರಿತ್ರೆಯನ್ನು ಅನುಸರಿಸಿದೆ. ಷಾರ್ಲ್‍ಮನ್ನನ ಲಂಬಾರ್ಡಿಯ ದಾಳಿಯಿಂದ (775) ಉತ್ತರ ಇಟಲಿ ಕ್ಯಾರೊಲಿಂಗಿಯನರ ಸಾಮ್ರಾಜ್ಯದ ಭಾಗವಾಯಿತು. ದಕ್ಷಿಣ ಭಾಗ ಸಿಸಿಲಿಯ ಅರಬ್ಬೀ ದಾಳಿಕಾರರು ಹಾಗೂ ಬೈಜಾóಂಟೈನ್ ಚಕ್ರಾಧಿಪತ್ಯದವರೊಡನೆ ವಿವಾದಕ್ಕೊಳಗಾದ ಪ್ರದೇಶವಾಗಿತ್ತು. 

ಪಶ್ಚಿಮ ಸಾಮ್ರಾಜ್ಯದ ಪುನಶ್ಚೇತನ : 9ನೆಯ ಶತಮಾನದ ಅಂತ್ಯದ ವೇಳೆಗೆ ಇಟಲಿ ವಿಘಟನ ಸ್ಥಿತಿಯಲ್ಲಿತ್ತು. ರಾಷ್ಟ್ರೀಯ ಏಕತೆಯ ಧ್ಯೇಯ ಎರಡನೆಯ ಲೊಯಿಯ ಮರಣದಿಂದ ಕುಸಿದುಬಿತ್ತು (875). ಉತ್ತರ ಹಾಗೂ ಮಧ್ಯ ಇಟಲಿಯ ಆಳ್ವಿಕೆ ಸ್ಥಳೀಯ ರಾಜರುಗಳ ಕೈವಶವಾಯಿತು. ಗಿಡೋ ಮತ್ತು ಸ್ಪಾಲೆಟೋದ ಲ್ಯಾಂಬರ್ಟೋ ಹಾಗೂ ಐವಾರಾದ ಬೆರೆಂಗಲ್ ಮುಂತಾದ ಮುಖ್ಯರು ಕೆಲವು ಕಾಲ ರಾಜ ಅಥವಾ ಸಾಮ್ರಾಟ್ ಎಂಬ ಬಿರುದು ಪಡೆದಿದ್ದರೂ ಅದರ ವಿಜಯ ಅಲ್ಪಾಯುವಾಗಿತ್ತು. ರೋಮ್‍ನಲ್ಲಿ ಪೋಪರು ಭೂ ಮಾಲೀಕ ಶ್ರೀಮಂತರ ಸೃಷ್ಟಿಕರ್ತರಾಗಿದ್ದರು. ಬೈಜಾóಂಟೈನ್ ಸಾಮ್ರಾಜ್ಯ ದಕ್ಷಿಣ ಇಟಲಿಯಲ್ಲಿ ಮುಖ್ಯವಾದ ಅಧಿಕಾರ ಹೊಂದಿತ್ತಾದರೂ ಲಂಬಾರ್ಡಿ ರಾಜರೂ ಇಟಲಿಯ ಸಾಗರೋತ್ತರ ವ್ಯಾಪಾರಿ ನಗರಗಳೂ ಇವರ ಅಧಿಕಾರಕ್ಕೊಳಗಾಗಿರಲಿಲ್ಲ. ಇದರ ಮಧ್ಯದಲ್ಲಿ ಹಂಗೆರಿಯವರು ಲಂಬಾರ್ಡಿಯ ಮೇಲೆ ಯುದ್ಧಕ್ಕೆ ಬಂದರು. ಆಫ್ರಿಕ ಸಿಸಿಲಿಗಳಿಂದ ಸಾರಸಿನರು ಬಂದು ಸಮುದ್ರತೀರಗಳ ಮೇಲೆ ದಾಳಿ ಮಾಡಿದರು. ಆಟೊ 1 ಎಂಬುವನು ಸಾಮ್ರಾಜ್ಯವನ್ನು ಪುನಶ್ಚೇತನಗೊಳಿಸಿದಾಗ ಇಟಲಿಯ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ ತೆರೆಯಿತು. ಪ್ರಾವೆನ್ಸ್‍ನ ಲೊಥೈರ್ ದೊರೆ ಸತ್ತಿದ್ದ. ಉತ್ತರಾಧಿಕಾರಿಯಾಗಿ ಬಂದ ಪ್ರತಿಸ್ಪರ್ಧಿಗಳನ್ನು ಹತ್ತಿಕ್ಕಬೇಕೆಂದು ದಿವಂಗತ ದೊರೆಯ ವಿಧವೆಯಾದ ಅಡಿಲೇಡ್ ಪ್ರಾರ್ಥಿಸಿಕೊಂಡಿದ್ದರಿಂದ ಇಲ್ಲಿಗೆ ಬರಲು ಆಟೋಗೆ ಅನುಕೂಲವಾಯಿತು. ಆತ ಬ್ರೆನ್ನರ್ ಕಣಿವೆಯನ್ನು 951ರಲ್ಲಿ ದಾಟಿ, ವಿರೋಧಿಗಳನ್ನು ಸೋಲಿಸಿ, ಅಡಿಲೇಡಳನ್ನು ವಿವಾಹವಾಗಿ ತಾನೇ ಇಟಲಿಯ ರಾಜನಾದ. ಆತ ಉತ್ತರ ಇಟಲಿಗೆ ನೀಡಿದ ಮಹಾ ಕೊಡುಗೆಯೆಂದರೆ ಶಾಂತಿ. ಲೀಚ್‍ಪೀಲ್ಡಿನಲ್ಲಿ (955) ಹಂಗೆರಿಯವರನ್ನು ಪರಾಭವಗೊಳಿಸಿ ಅವರ ಅತ್ಯಾಚಾರವನ್ನು ಆತ ಅಂತ್ಯಗೊಳಿಸಿದ. ಆತನ ಸ್ಥೈರ್ಯ ಸಮಚಿತ್ತಗಳ ಪರಿಣಾಮವಾಗಿ ಅನೇಕ ಶ್ರೀಮಂತರೂ ಶ್ರೀಮಂತಿಣಿಯರೂ ಆತನಿಗೆ ವಿಧೇಯರಾದರೂ. ಇವರು ಅತಿಯಾಗಿ ಹೆಚ್ಚಿಕೊಳ್ಳದಂತೆ ಮಾಡಲು ಇವರ ಅಧಿಕಾರಕ್ಕೆ ಪ್ರತಿಯಾಗಿ ಬಿಷಪ್‍ಗಳ ಅಧಿಕಾರವನ್ನೂ ಆತ ಹೆಚ್ಚಿಸಿದ. ರೋಮನ್ನರ ಕಾಲದಿಂದಲೂ ತಂತಮ್ಮ ದೇವಾಲಯನಗರಗಳನ್ನಾಳುತ್ತ ರಾಜರೊಂದಿಗೆ ಸಹವರ್ತಿಸುತ್ತಿದ್ದ ಇದರಿಂದ ನಗರಗಳು ಬೆಳೆದಿದ್ದುವು. ಆಟೋ 1 ರೋಮನ್ ಸಾಮ್ರಾಟನಾದ; ಉತ್ತರ ಇಟಲಿಯನ್ನೂ ಜರ್ಮನಿಯನ್ನೂ ಒಂದೇ ಆಡಳಿತದ ಅಡಿಗೆ ತಂದ. ಅಲ್ಲಿಂದ ಮುಂದೆ ಜರ್ಮನಿಯ ಪ್ರಭುಗಳಿಂದ ದೊರೆಯಾಗಿ ಆಯ್ಕೆಯಾದವನೇ ಇಟಲಿಯ ಚಕ್ರವರ್ತಿಯೂ ಆಗುತ್ತಿದ್ದ. ಆಟೊ ಇಟಲಿಯನ್ನು ಒಟ್ಟುಗೂಡಿಸಲಿಲ್ಲ. ಏಕೆಂದರೆ ಆತನೂ ತನ್ನ ಉತ್ತರಾಧಿಕಾರಿಗಳೂ ದಕ್ಷಿಣದಲ್ಲಿ ತಮ್ಮ ಅಧಿಕಾರವನ್ನು ಸರಿಯಾಗಿ ಸ್ಥಾಪಿಸಲಿಲ್ಲ. ಉತ್ತರ ಹಾಗೂ ದಕ್ಷಿಣ ಇಟಲಿಗಳ ನಡುವೆ ಸಂಬಂಧ ಕಲ್ಪಿಸುವುದೂ ಉತ್ತರದವರ ಮೇಲೆ ಪರಕೀಯರ ಆಡಳಿತ ತರುವುದೂ ಅವರ ಉದ್ದೇಶವಾಗಿತ್ತು. ಅವರು ತಮ್ಮ ಹಿತಗಳ ದೃಷ್ಟಿಯಿಂದಲೇ ಇಟಲಿಯನ್ನಾಳುತ್ತಿದ್ದರು. ಮೂರನೆಯ ಆಟೊ ಕಾಲದಲ್ಲಿ ರೋಮ್ ಈ ರಾಜ್ಯದ ಕೇಂದ್ರವಾಗಬಹುದಾಗಿತ್ತು. ಆದರೆ ರೋಮನರು ಆತನನ್ನು ಅಲ್ಲಿಂದ ಓಡಿಸಿದರು. ಆತ ಸತ್ತಾಗ (1002) ರೋಮಿನಲ್ಲಿದ್ದ ಸ್ಥಳೀಯ ಅರಸುಮನೆತನದವನೊಬ್ಬ ಬಲಿಷ್ಠನಾದ. ವಿದೇಶೀಯರ ವಿರುದ್ಧವಾಗಿದ್ದ ಜನಾಭಿಪ್ರಾಯದ ಉಪಯೋಗ ಪಡೆದುಕೊಂಡು ಆತನೇ ಕಿರೀಟ ಧರಿಸಿಕೊಂಡ. 
ಆಟೊ ಸಾಮ್ರಾಜ್ಯದ ಕಾಲದಲ್ಲಿ ಪೋಪ್ ವ್ಯವಸ್ಥೆಗೆ ಅಂತರರಾಷ್ಟ್ರೀಯತೆಯ ಲಕ್ಷಣ ಬಂತು. ಮೊದಲನೆಯ ಆಟೊ ತನ್ನ ಕಾಲದಲ್ಲಿ ಒಂದು ಕ್ರೈಸ್ತಧರ್ಮಸಭೆ ನಡೆಸಿದ. ಚಕ್ರವರ್ತಿಯಿಂದ ನೇಮಕವಾದವನೇ ಪೋಪ್ ಆಗಬೇಕೆಂಬ ತತ್ತ್ವಕ್ಕೆ ರೋಮನ್ನರಿಂದ ಅಸ್ತು ಎನಿಸಿದ. ಮೂರನೆಯ ಆಟೊ ನೇಮಿಸದ ಐದನೆಯ ಗ್ರಿಗರಿ ಪ್ರಥಮ ಜರ್ಮನ್ ಪೋಪ್ ಆದ. ಈತನ ಕಾಲಾನಂತರ ಬಮದ ಆರಿಲಾರ್ಕ್ ಗಿರ್ಬರ್ಟ್ ಎಂಬುವನು ಇಮ್ಮಡಿ ಸಿಲ್ವೆಸ್ಟರ್ ಆದ. ಮುಮ್ಮಡಿ ಆಟೋನೊಂದಿಗೆ ಸಹಕರಿಸಿದ. ಪ್ರಪಂಚವ್ಯಾಪಿ ಕ್ರೈಸ್ತ ಪ್ರಭುತ್ವದ ರಚನೆಗೆ ನೆರವಾದ. ಚಕ್ರಾಧಿಪತಿಗಳಿಂದ ಚರ್ಚುಸುಧಾರಣಾ ಚಳವಳಿಗೆ ಉತ್ತೇಜನ ದೊರಕಿತು. ಇದು ಹನ್ನೊಂದನೆಯ ಶತಮಾನದ ಇತಿಹಾಸದ ಒಂದು ಪ್ರಮುಖ ಘಟನೆ. ಪೋಪ್ ತುರ್ತುರಕ್ಷಣೆಯಲ್ಲಿ ಅವರಿಗೂ ಅವರ ಅಧಿಕಾರಕ್ಕೂ ಅನೇಕ ವೈರಿಗಳುಂಟಾದರು. ಧರ್ಮವಿಕ್ರಯ ಪೋಪ್‍ವಿವಾಹ ಮುಂತಾದುವನ್ನು ಸುಧಾರಕರು ವಿರೋಧಿಸಿದರು. ಈ ರೀತಿಯಲ್ಲಿ ಸುಧಾರಕರು ಚಕ್ರವರ್ತಿಗಳೊಡನೆ ಹೋರಾಡುವುದು ಅನಿವಾರ್ಯವಾಯಿತು. ಈ ಹೋರಾಟ ಬಹುಕಾಲ ಮುಂದುವರಿಯಿತು. ಇಟಲಿಯಲ್ಲಿ ಈ ಹೋರಾಟದ ಪರಿಣಾಮವಾಗಿ ಚಕ್ರವರ್ತಿಯ ಶಕ್ತಿ ಕುಂಠಿತವಾಯಿತು. ಪೋಪ್ ವ್ಯವಸ್ಥೆಯಲ್ಲಿ ಗೌರವ ಹೆಚ್ಚಿತು. ನಗರಗಳು ಸ್ವತಂತ್ರವಾದುವು. 11ನೆಯ ಶತಮಾನದ ಕೊನೆಯ ವೇಳೆಗೆ ಇಟಲಿಯ ನಗರವಾಸಿಗಳು ಶಿಷ್ಟಾಚಾರಗಳನ್ನು ಕಲಿತಿದ್ದರು. ತಾವು ಆರಿಸಿದವರನ್ನು ಪ್ರತಿನಿಧಿಗಳೆಂದು ಕರೆಯುವ ಹಾಗೂ ರೋಮ್ ಜನರ ಹಕ್ಕುದಾರರಾಗಿ ಸ್ವಸರ್ಕಾರವನ್ನು ರಚಿಸಿಕೊಳ್ಳುವ ನ್ಯಾಯಾಂಗ ತರಬೇತಿ ಹೊಂದಿದ್ದರು. ಕೆಲವೊಮ್ಮೆ ನಗರವೊಂದಕ್ಕೆ ಸನ್ನದನ್ನು ನೀಡುವುದರ ಮೂಲಕ ನಗರವೊಂದರ ಬೆಂಬಲವನ್ನು ರಾಜ ಪಡೆಯುತ್ತಿದ್ದ. ಕೆಲವೊಮ್ಮೆ ಬಿಷಪ್ ಮಾಡುತ್ತಿದ್ದ ಧಾರ್ಮಿಕ ಕಟ್ಟಳೆಗಳು ಪ್ರಿಯವಾಗದಿದ್ದರೆ ಜನ ಅವನ ವಿರುದ್ಧ ದಂಗೆಯೇಳುತ್ತಿದ್ದರು. ಈ ರೀತಿಯಲ್ಲಿ ಹನ್ನೆರಡನೆಯ ಶತಮಾನದಲ್ಲಿ ಉತ್ತರ ಹಾಗೂ ಮಧ್ಯ ಇಟಲಿಯ ನಗರರಾಜ್ಯಗಳೆಲ್ಲವೂ ತಮ್ಮ ತಮ್ಮಲ್ಲೇ ಬಲಿಷ್ಠವಾಗಿದ್ದುವಲ್ಲದೆ. ಹೊರಗಡೆ ಭೂಭಾಗಗಳನ್ನು ಹೊಂದಿದ್ದವರು ತಮ್ಮ ಅಧಿಕಾರವನ್ನು ಒಪ್ಪುವಂತೆ ಮಾಡಿದ್ದುವು.

ಸಾಮ್ರಾಜ್ಯ ಹಾಗೂ ಪೋಪಧಿಕಾರ : ಹನ್ನೊಂದನೆಯ ಶತಮಾನದಲ್ಲಿ ನಾರ್ಮನ್ನರು ದಕ್ಷಿಣ ಇಟಲಿಯನ್ನು ವಶಮಾಡಿಕೊಂಡರು. ಹನ್ನೆರಡನೆಯ ಶತಮಾನದಲ್ಲಿ ಸಿಸಿಲಿಯನ್ನು ವಶಪಡಿಸಿಕೊಂಡು ತಮ್ಮ ಆದಾಯವನ್ನು ಅಧಿಕಗೊಳಿಸಿಕೊಂಡರು. ಅವರು ಚರ್ಚ್ ಹಾಗೂ ಸುಧಾರಣೆಗಳ ಬೆಂಬಲಿಗರಾಗಿದ್ದರು. ಪೋಪರು ಮೊದಮೊದಲು ಇವರ ಮುಂಬರವನ್ನು ತಡೆಗಟ್ಟಿದರೂ ಸಿಸಿಲಿಯನ್ ರಾಜ್ಯದಲ್ಲಿ ಚಕ್ರಾಧಿಪತ್ಯವಿರೋಧಿ ರಕ್ಷಣಾ ವ್ಯವಸ್ಥೆಯನ್ನು ಗಮನಿಸಿದರು. 1154ರಲ್ಲಿ ಫ್ರೆಡರಿಕ್ ಬಾರ್ಬರೋಸ್ ಇಟಲಿಯಲ್ಲಿ ಪುನಃ ಸಾಮ್ರಾಜ್ಯಶಕ್ತಿ ಸ್ಥಾಪಿಸಲು ಆಲ್ಪ್ಸ್‍ನ್ನು ದಾಟಿದಾಗ, ತನ್ನ ಯಾವುದೇ ರಾಜತ್ವದ ಹಕ್ಕುಗಳನ್ನು ಅವರ ಮೇಲೆ ಹೇರಿದಲ್ಲಿ ವಿರೋಧಿಸಲಿದ್ದ ಮೂರು ರಾಜಕೀಯ ಕೇಂದ್ರಗಳನ್ನು ಗಮನಿಸಿದ; ಅವುಗಳ ಅಭಿವೃದ್ಧಿಯನ್ನು ಕುಂಠಿತಗೊಳಿಸಲು ಇಚ್ಛಿಸಿದ. ಸಾಮ್ರಾಜ್ಯ ಹಾಗೂ ಪೋಪನ ಅಧಿಕಾರಗಳ ವಿರುದ್ಧ ಹೊಸ ಹೋರಾಟ ಆರಂಭವಾಯಿತು. ಈ ಘರ್ಷಣೆಗಳು ಬಹುಕಾಲ ನಡೆದವು. ಹದಿಮೂರನೆಯ ಶತಮಾನದ ಉತ್ತರಾರ್ಧದ ವೇಳೆಗೆ ಚಕ್ರವರ್ತಿಗಳ ಕೈವಾಡ ಕೊನೆಗೊಂಡಿತ್ತು. ನಗರರಾಜ್ಯಗಳು ತಮ್ಮ ಅಭ್ಯುದಯದ ಶಿಖರವನ್ನೇರಿದ್ದವು; ಯಾವುದೇ ಅಧಿಪತಿಯ ಆಡಳಿತಕ್ಕೊಳಗಾಗಬಾರದೆಂದು ನಿರ್ಧರಿಸಿದ್ದುವು. ತನ್ನ ಶಕ್ತಿಯ ಅರಿವನ್ನು ಹೊಂದಿದ್ದ, ಗಣರಾಜ್ಯ ಪರಂಪರೆಯಲ್ಲಿ ಭವ್ಯತೆಯಿಂದ ಮೆರೆಯುತ್ತಿದ್ದ, ಕಲೆಯಲ್ಲಿ ಪ್ರಖ್ಯಾತವಾಗಿದ್ದ ಫ್ಲಾರೆನ್ಸ್ ನಾಗರಿಕ ಸ್ವಾತಂತ್ರ್ಯಕ್ಕೆ ಉತ್ತಮ ಉದಾಹರಣೆಯಾಗಿತ್ತು. ಎಂಟನೆಯ ಬೋನಿಫೇಸನ (1204-1303) ಕಾಲದಲ್ಲಿ ಇಟಲಿಯ ಮೇಲೆ ಪೋಪಧಿಕಾರ ಹೇರಲು ಪ್ರಯತ್ನಗಳು ನಡೆದುವು. ಆದರೆ ಇವು ಯಶಸ್ವಿಯಾಗಲಿಲ್ಲ. ಮಧ್ಯಯುಗದ ಪೋಪಧಿಕಾರ ಕ್ಷೀಣಿಸಿಹೋಯಿತು. 

ಸ್ಥಳೀಯ ನಿರಂಕುಶ ಪ್ರಭುತ್ವದ ಪ್ರಾಬಲ್ಯ : 14ನೆಯ ಶತಮಾನದಲ್ಲಿ ಇಟಲಿಯಲ್ಲಿ ವಾಣಿಜ್ಯ ಕ್ರಿಯೆ ಹೆಚ್ಚಿತು: ಕಲೆಯ ಅಭಿವೃದ್ದಿಯಾಯಿತು. ಅಂತೆಯೇ ವಿಪರೀತವಾದ ರಾಜಕೀಯ ಗೊಂದಲವೂ ಉಂಟಾಯಿತು. ಊರಿಂದೂರಿಗೆ ಅಲೆದಾಡುತ್ತಿದ್ದ ಡಾಂಟೆ ಮಹಾಕವಿಗೆ ಎಲ್ಲೆಲ್ಲೂ ಕ್ಷೋಭೆಯೆ ಕಾಣಿಸಿತು. ಪ್ರತಿಯೊಂದು ನಗರದಲ್ಲೂ ಇದ್ದ ಪರದೇಶಿಗಳು ಬಾಹ್ಯಶತ್ರುಗಳೊಡನೆ ಕೂಡಿ ಅಧಿಕಾರ ಪಕ್ಷದವರನ್ನುರುಳಿಸುವ ಯತ್ನದಲ್ಲಿ ತೊಡಗಿದ್ದರು. ನಗರವಾಸಿಗಳು ಸರ್ವದಾ ದಾಳಿಯ ಭೀತಿಗೆ ತುತ್ತಾಗಿದ್ದರು. ಇಟಲಿಯವರ ಸೃಷ್ಟ್ಯಾತ್ಮಕ ಶಕ್ತಿಯನ್ನುತ್ತೇಜಿಸಬಲ್ಲ ಸುಭದ್ರ ಆಳ್ವಿಕೆಯ ಅವಶ್ಯಕತೆಯಿತ್ತು. ರೋಮನ್ ಜನತೆಯನ್ನು ಪ್ರತಿನಿಧಿಸಬಲ್ಲ ರಾಜನ ಆಗಮನದಿಂದ ಮಾತ್ರವೇ ಇಟಲಿಯ ರಾಜಕೀಯ ಏಕತೆಯನ್ನು ಸಾಧಿಸಬಹುದೆಂಬುದು ಡಾಂಟಯ ಅಭಿಪ್ರಾಯವಾಗಿತ್ತು. ಆಲ್ಪ್ಸ್ ಪರ್ವತದಾಚೆಯ ಚಕ್ರವರ್ತಿಯಿಂದ ಇಟಲಿಯವರನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲವೆಂಬುದು ಏಳನೆಯ ಹೆನ್ರಿಯ (1308-13) ಆಳ್ವಿಕೆಯಿಂದ ಸ್ಪಷ್ಟವಾಗಿತ್ತು. ಈತನಿಗೆ ರೋಮ್‍ನಲ್ಲಿ ರಾಜ್ಯಾಭಿಷೇಕವಾಯಿತು. ಫ್ಲಾರೆನ್ಸನ್ನು ವಶಪಡಿಸಿಕೊಂಡ ಅನಂತರ ಈತ ಪೀಸಾದಲ್ಲಿ ಕಾಲವಾದ. ಇಟಲಿಯ ಏಕೀಕರಣಕ್ಕೆ ಅನೇಕ ಮಾರ್ಗಗಳನ್ನು ಅನುಸರಿಸಲಾಯಿತು. 1313ರಿಂದ 1343ರ ವರೆವಿಗೆ ನೇಪಲ್‍ನ ದೊರೆಯಾಗಿದ್ದ ಅಂಜೌನ ಆಳ್ವಿಕೆಯಲ್ಲಿ ಗೈಲ್ಪ್ ಜನರು ಹೆಚ್ಚು ನೀರಿಕ್ಷೆ ಇಟ್ಟುಕೊಂಡಿದ್ದರು. ಇವನಿಗೆ ಫ್ಲಾರೆನ್ಸಿನ ಅಧಿಪತ್ಯವನ್ನು ಐದು ವರ್ಷಗಳ ಕಾಲ ನೀಡಲಾಗಿತ್ತು. ಈತ ಇಟಲಿಯ ಪೋಪ್ ಹಾಗೂ ಫ್ರಾನ್ಸುಗಳೆರಡನ್ನೂ ಪ್ರತಿನಿಧಿಸುತ್ತಿದ್ದ. 1347ರಿಂದ 54ರ ವರೆಗೆ ರೀಂಜಿ ಎಂಬುವನು ಇಟಲಿಯ ಒಗ್ಗಟ್ಟಿಗಾಗಿಯೂ ಅಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗಾಗಿಯೂ ಶ್ರಮಿಸಿದ. ಇದಾದ ಅನಂತರ ಪೋಪಧಿಕಾರವನ್ನು ಮತ್ತೆ ಸ್ಥಾಪಿಸುವ ಪ್ರಯತ್ನ ನಡೆಯಿತು. 1367ರಲ್ಲಿ ರೋಮಿಗೆ ಹಿಂದಿರುಗಿದ ಐದನೆಯ ಆರ್ಬನ್ ಎಂಬುವನು ಅಲ್ಲಿ ಕೇವಲ ಮೂರು ವರ್ಷಗಳ ಕಾಲ ಇದ್ದ. ಪೋಪನ ಸಾನ್ನಿಧ್ಯದಿಂದ ಶಾಂತಿಯೇನೂ ಇರಲಿಲ್ಲ. ಪ್ರತಿಯಾಗಿ ಕಲಹವೇ ತೀವ್ರವಾಯಿತು. ವಿದೇಶಿ ವ್ಯಾಪಾರಿಕೂಟಗಳು ದೇಶದಲ್ಲೆಲ್ಲ ಸುಲಿಗೆ ಹಾಗೂ ಕೊಲೆಮಾಡುತ್ತ ಸುತ್ತಾಡಿದುವು. ನಗರ ರಾಜ್ಯಗಳಲ್ಲಿ ನಿರಂಕುಶಪ್ರಭುಗಳ ಅಭ್ಯುದಯದಿಂದ ಹೊಸರೀತಿಯ ರಾಜಕೀಯ ವ್ಯವಸ್ಥೆಯೊಂದು ಉದ್ಭವಿಸಿತು. ಹೋರಾಟಗಳನ್ನು ಹತ್ತಿಕ್ಕಿ ದೇಶದಲ್ಲಿ ಶಾಂತಿ ನೆಲಸುವಂತೆ ಮಾಡಿ ಬಾಹ್ಯಶತ್ರುಗಳಿಂದ ದೇಶವನ್ನು ರಕ್ಷಿಸುವುದೂ ಎಲ್ಲ ವರ್ಗಗಳ ಹಿತಾಸಕ್ತಿಯ ದೃಷ್ಟಿಯಿಂದ ಆಳ್ವಿಕೆ ನಡೆಸುವುದೂ ಇದರ ಉದ್ದೇಶವಾಗಿತ್ತು. 
ಹೊಸಹುಟ್ಟು ಹಾಗೂ ಅನಂತರ : ಹದಿನೈದನೆಯ ಶತಮಾನದ ಆರಂಭದಲ್ಲಿ ನೇಪಲ್ಸ್, ಪೋಪಾಡಳಿತ, ಫ್ಲಾರೆನ್ಸ್, ಮಿಲಾನ್ ಹಾಗೂ ವೆನಿಸ್‍ಗಳಲ್ಲಿ ಇಟಲಿ ಹಂಚಿಹೋಗಿತ್ತು. ಈ ಶತಮಾನದ ಮೊದಲರ್ಧ ಭಾಗದಲ್ಲಿ ಪ್ರತಿರಾಜ್ಯವೂ ತನ್ನ ಎಲ್ಲೆಗಳನ್ನು ವಿಸ್ತರಿಸುವುದರಲ್ಲಿ ಅಥವಾ ಶಕ್ತಿಯನ್ನು ಪ್ರಬಲಗೊಳಿಸಿಕೊಳ್ಳುವುದರಲ್ಲಿ ನಿರತವಾಗಿತ್ತು. ಈ ನಗರಗಳ ನಡುವೆ ನಡೆಯುತ್ತಿದ್ದ ದೀರ್ಘಯುದ್ಧ 1454ರಲ್ಲಿ ನಿಂತಿತು. ಅಲ್ಲಿ ಪ್ರಬಲವಾಗಿದ್ದ ಮೂರು ರಾಷ್ಟ್ರಗಳು ಸೇರಿ ಒಂದು ರಕ್ಷಣಾಕೂಟ ಸ್ಥಾಪಿಸಿಕೊಂಡುವು. ಇದು ರಾಷ್ಟ್ರೀಯ ಏಕತೆಯ ಅಸ್ತಿಭಾರವಾಗುವಂತೆ ಕಂಡಿತು. ವಿದೇಶೀಯರ ದಾಳಿಯನ್ನು ತಡೆಯುವುದರಲ್ಲಂತೂ ರಕ್ಷಣಾ ಕವಚವಾಯಿತು. ಇಟಲಿಯ ರಾಜರು ತಮ್ಮ ಸಾಮಾನ್ಯ ಆದರ್ಶಗಳು, ಆಸಕ್ತಿಗಳು ಹಾಗೂ ಹೆದರಿಕೆಗಳನ್ನು ಅಭಿವ್ಯಕ್ತಿಗೊಳಿಸಿದರು. ಎರಡು ಸಣ್ಣ ರಾಜ್ಯಗಳನ್ನು ಬಿಟ್ಟು ಮಿಕ್ಕೆಲ್ಲವೂ ಈ ಕೂಟದಲ್ಲಿ ಸೇರಿದ್ದುವು. ಆಗಲಿದ್ದ ಸಣ್ಣಪುಟ್ಟ ಯುದ್ದಗಳು ಇದರಿಂದ ನಿಂತುವು. ಇದು 1480ರಲ್ಲಿ ಮತ್ತೆ ಇಪ್ಪತ್ತೈದು ವರ್ಷಗಳ ಜೀವದಾನ ಪಡೆಯಿತು. ನಲವತ್ತು ವರ್ಷಗಳ ಕಾಲ ಯಾವುದೇ ಯುದ್ಧದ ಭಯವಿಲ್ಲದಂತಾಯಿತು. ಆಗ ಇಟಲಿ ತನ್ನೆಲ್ಲ ಶಕ್ತಿಯನ್ನೂ ಕಲೆಯ ಅಭಿವೃದ್ಧಿಗೆ ಉಪಯೋಗಿಸಿಕೊಂಡಿತು. ಹೊಸ ಹುಟ್ಟಿನ ನಾಗರಿಕತೆಗೆ ಪ್ರತಿಯೊಂದು ನಗರವೂ ತನ್ನದೇ ಆದ ಮಹತ್ಕಾಣಿಕೆ ನೀಡಿತು. ಕಟ್ಟಡಗಳ ರಚನೆ ಹಾಗೂ ಉತ್ಸವಗಳಲ್ಲಿ ಒಂದರೊಡನೊಂದು ಪೈಪೋಟಿಯಿಂದ ಸ್ಪರ್ಧಿಸಿದುವು. ನಾಗರಿಕತೆಯ ಪ್ರಭಾವದಿಂದ ಇಟಲಿಯನ್ನು ಆಳುತ್ತಿದ್ದವರು ಯುದ್ದ ಭಯವನ್ನೇ ಮರೆತಿದ್ದರು. ಶಾಂತಿ ಕಾಲದಲ್ಲಿ ಪ್ರೋತ್ಸಾಹ ಹೊಂದಿ ಅಭಿವೃದ್ಧಿಗೊಂಡಿದ್ದ ಕಲೆ ಪ್ರಥಮ ಫ್ರೆಂಚ್ ದಾಳಿಯ ಕಾಲದಲ್ಲಿ (1494) ಮತ್ತೆ ಅಸ್ತವ್ಯಸ್ತಗೊಂಡಿತು. 

ಲೊರೆóಂಜೊ ಡಿ ಮೆಡಿಚ ತನ್ನೆಲ್ಲ ಶಕ್ತಿಗಳನ್ನು ಇಟಲಿಯ ದೇಶಗಳ ನಡುವೆ ಶಾಂತಿ ಸೌಹಾರ್ದಗಳನ್ನು ಬೆಳೆಯಿಸಲು ವ್ಯಯಿಸಿದ್ದ. ಇವನು 1492ರಲ್ಲಿ ಮೃತನಾದ. ಫ್ರಾನ್ಸಿನ ದೊರೆ ಮಿಲಾನ್, ನೇಪಲ್ಸ್ ಹಾಗೂ ಇಟಲಿಯ ಸಾಧನೆಗಳ ಮೇಲೆ ತನ್ನ ದೃಷ್ಟಿ ಬೀರಿದ. ಇಟಲಿಯ ರಾಜ್ಯಗಳ ಸಾಮೂಹಿಕ ವಿರೋಧ ಎಂಟನೆಯ ಚಾರಲ್ಸ್‍ನ ಯತ್ನವನ್ನು ವಿಫಲಗೊಳಿಸಬಹುದಿತ್ತು. ಆದರೆ ಫ್ಲಾರೆನ್ಸ್ ಮೆಡಿಚಿಯನ್ನು ಮಿತ್ರನಂತೆ ಆಹ್ವಾನಿಸಿತು. ಇವನು ನೇಪಲ್ಸ್ ವರೆಗೆ ತಡೆಯಿಲ್ಲದೆ ತನ್ನ ವಿಜಯಯಾತ್ರೆ ಮುಂದುವರಿಸಿದ. ಚಾರಲ್ಸ್ ಮುನ್ನುಗುವುದರಲ್ಲಿ ಯಶಸ್ವಿಯಾದರೂ ಇಟಲಿಗೆ ಬಂದ ಒಂದು ವರ್ಷದಲ್ಲೇ ನೇಪಲ್ಸನ್ನು ತನ್ನ ಕೈಯಿಂದ ಕಳೆದುಕೊಂಡ. ಸ್ಪೇನಿನ ಫರ್ಡಿನೆಂಡ್ ಮತ್ತು ಮ್ಯಾಕ್ಸಿಮಿಲಿಯನ್ ಸಮ್ರಾಟರು ವೆನಸ್‍ನ ಲೀಗ್ ಸೇರಿದರು. ಸ್ಪಾನಿಷ್ ಸೈನ್ಯ ನೇಪಲ್ಸನ್ನು ವಶಪಡಿಸಿಕೊಂಡಿತು. ಕ್ರಮೇಣ ಇಟಲಿ ಸ್ಪೇನಿಗೆ ಅಧೀನವಾಯಿತು. 1530ರಲ್ಲಿ ಬೊಲೊನಾದಲ್ಲಿ ಐದನೆ ಚಾರಲ್ಸ್‍ನ ರಾಜ್ಯಾಭಿಷೇಕವಾದ ಮೇಲೆ ಮುಂದಿನ ಮೂವತ್ತು ವರ್ಷಗಳಲ್ಲಿ ಸ್ಪ್ಯಾನಿಷ್ ಪ್ರಾಬಲ್ಯ ಮತ್ತಷ್ಟು ಅಧಿಕ ಗೊಂಡಿತು. ಈತ ಇಟಲಿಯ ಸಾಮ್ರಾಜ್ಯದ ಅಧಿಕಾರವನ್ನು ಸ್ಪೇನಿಗೆ ಬದಲಾಯಿಸಿದ. ಮೊದಲ ಪಾಳೆಯಗಳು ಖಚಿತಗೊಂಡುವು. ಸ್ಪೇನಿನ ನಡೆ ನುಡಿಗಳನ್ನು ಇಟಲಿಯ ಜನರು ವ್ಯಾಪಕವಾಗಿ ಅನುಸರಿಸಲಾರಂಭಿಸಿದರು. ಆದರೆ ಅದಕ್ಕೆ ಮುಂಚಿನ ಯುದ್ಧವರ್ಷಗಳಲ್ಲಿ, ಲಿಯೊನರ್ಡೋ, ರ್ಯಾಫೆಲ್, ಮೈಕಲೇಂಜಲೊ ಅರಿಸೋಟೊ ಹಾಗೂ ಮ್ಯಾಕಿಯವೆಲಿ ಮುಂತಾದವರಿಂದ ಕಲಾಕ್ಷೇತ್ರ ರಾರಾಜಿಸಿತು. (ಅವರ ವ್ಯಕ್ತಿತ್ವ ಮತ್ತು ಸಾಧನೆಗಳಿಗೆ ಆಯಾ ಶೀರ್ಷಿಕೆಗಳನ್ನು ನೋಡಿ.) ಫ್ರೆಂಚರು ಈ ಹೊಸ ಹುಟ್ಟನ್ನು ತಮ್ಮೊಡನೆ ತಮ್ಮ ನಾಡಿಗೂ ಕೊಂಡೊಯ್ದರು. ವಿದೇಶೀಯರ ಆಳ್ವಿಕೆಗೆ ಇಟಲಿ ಒಳಗಾದರೂ ಇಟಲಿಯ ನಾಗರಿಕತೆ ಯೂರೋಪನ್ನು ಸೆರೆಹಿಡಿದಿತ್ತು. 

ವಿದೇಶೀಯರ ಪ್ರಭುತ್ವ : ಇಟಲಿಯ ರಾಜ್ಯಗಳಲ್ಲೆಲ್ಲ ವೆನಿಸ್ ಅತ್ಯುತ್ತಮ ಆಡಳಿತವುಳ್ಳ ಅತಿ ವೈಭವಯುತಾದ ಮತ್ತು ಉದಾರನೀತಿ ಹೊಂದಿದ್ದ ರಾಜ್ಯ. ಸ್ಪಾನಿಷರು ಇಟಲಿಯನ್ನು ಆಕ್ರಮಿಸಿದ್ದ ಕಾಲ ಅದರ ಇತಿಹಾಸದಲ್ಲಿ (1559-1700) ಅತ್ಯಂತ ಕಳಾಹೀನವಾದ ಕಾಲ. ಹೆಚ್ಚಿನ ಸಂಖ್ಯೆಯ ಯುದ್ಧಗಳಿಂದಲೂ ಹೆಚ್ಚಿನ ತೆರಿಗೆಗಳಿಂದಲೂ ದೇಶದ ಜನ ಕಂಗೆಟ್ಟಿದ್ದರು. ಭ್ರಷ್ಟಾಚಾರಿ ಅಧಿಕಾರಿಗಳಿಂದ ಕೂಡಿದ್ದ ನೇಪಲ್ಸ್ ಹಾಗೂ ಸಿಸಿಲಿಗಳು ಉಪವಾಸದಿಂದ ಕಂಗೆಟ್ಟಿದ್ದುವು. ಸ್ಪಾನಿಷ್ ಉತ್ತಾರಾಧಿಕಾರದ ಕಾಲದಲ್ಲಿ ಇಟಲಿ ಮತ್ತೊಮ್ಮೆ ಯೂರೋಪ್ ರಾಷ್ಟ್ರಗಳ ಯುದ್ಧಕ್ಷೇತ್ರವಾಯಿತು. ಇಟಲಿಯ ಪ್ರದೇಶಗಳು ಹಲವಾರು ರಾಷ್ಟ್ರಗಳ ನಡುವೆ ಹರಿದು ಹಂಚಿಹೋಗಿದ್ದುವು. ಆದರೆ ಯಾವುದೇ ರಾಷ್ಟ್ರಕ್ಕೆ ಪ್ರಾಬಲ್ಯ ದೊರೆತಿರಲಿಲ್ಲ. ಹದಿನೆಂಟನೆಯ ಶತಮಾನದ ಮೊದಲಭಾಗದಲ್ಲಿ ಇಟಲಿಯ ನಕ್ಷೆಯಲ್ಲಿ ಸಾಕಷ್ಟು ಬದಲಾವಣೆಗಳಾದುವು. ಈ ಬದಲಾವಣೆಗಳಿಗೆ ಸ್ಪೇನಿನ ಐದನೆ ಫಿಲಿಪ್‍ನ ಎರಡನೆಯ ಪತ್ನಿ ಫಾರ್ನೆಸ್ ಮತ್ತು ಮಂತ್ರಿ ಅಲ್ಬೆರೊನಿ ಮುಖ್ಯರಾಗಿದ್ದರು. ಸ್ಪೇನ್ ಕಳೆದುಕೊಂಡಿದ್ದ ಪ್ರದೇಶಗಳನ್ನು ಮತ್ತೆ ಪಡೆಯುವುದೇ ಅವರ ಉದ್ದೇಶವಾಗಿತ್ತು. ಸಿಸಿಲಿ ಮತ್ತು ಸಾರ್ಡಿನಿಯಗಳನ್ನು ಸ್ಪಾನಿಷ್ ಸೈನ್ಯಗಳು ವಶಪಡಿಸಿಕೊಂಡುವು. ಆದರೆ 1720ರಲ್ಲಿ ಅವರು ಗೆದ್ದಿದ್ದ ಪ್ರದೇಶಗಳನ್ನು ಮತ್ತೆ ಹಿಂತೆಗೆದುಕೊಂಡು, ಸಿಸಿಲಿಯನ್ನು ಆಸ್ಟ್ರಿಯಕ್ಕೆ ನೀಡಲಾಯಿತು. ಇದಕ್ಕೆ ಮೊದಲು ಚಾರಲ್ಸ್ ಇಮ್ಯಾನುಯಲ್ ಮಿಲಾನನ್ನು ವಶಪಡಿಸಿಕೊಂಡಿದ್ದ. ಆಸ್ಟ್ರಿಯ ತನ್ನೆಲ್ಲ ಶಕ್ತಿಯನ್ನೂ ಕಳೆದುಕೊಂಡಿದ್ದಂತೆ ಕಂಡುಬಂತು. ಸ್ಪೇನ್ ಮತ್ತು ಸವಾಯ್‍ಗಳೆರಡೂ ಒಂದನ್ನೊಂದು ನಂಬಲಿಲ್ಲ. ಎರಡೂ ಮಿಲಾನಿಗಾಗಿ ದುರಾಸೆಪಟ್ಟವು. ಇವುಗಳ ನಡುವೆ ಸಹಕಾರವಿಲ್ಲದ್ದು ಆಸ್ಟ್ರಿಯದ ಪ್ರಾಬಲ್ಯ ಬೆಳೆಯಲು ಅವಕಾಶವಾಯಿತು. ಆಸ್ಟ್ರಿಯನ್ ಉತ್ತರಾಧಿಕಾರಕ್ಕೆ ಸವಾಯ್ ಮತ್ತು ಸ್ಪೇನ್‍ಗಳು ಪರಸ್ಪರ ವಿರುದ್ಧ ಗುಂಪುಗಳಲ್ಲಿ ಹೋರಾಡಿದುವು. ಇದರ ಅಂತ್ಯದಲ್ಲಿ ಎಕ್ಸ್-ಲಾ-ಷಾಪೆಲ್ ಕರಾರಿನಿಂದ (1748). ಎಲಿಜಬೆತ್‍ಳ ಎರಡನೆಯ ಪುತ್ರನಿಗೆ ಮರ್ಮ ಮತ್ತು ಪಿಯಾಸೆಂಜಗಳು ದತ್ತವಾದುವು. ಹ್ಯಾಪ್ಸ್ ಬರ್ಗ್ ವಂಶದ ವ್ಯವಸ್ಥೆಯಿಂದ ಇಟಲಿ ಐವತ್ತು ವರ್ಷಗಳ ಕಾಲ ಶಾಂತಿಯನ್ನನುಭವಿಸಿತು. 18ನೆಯ ಶತಮಾನದ ಸುಧಾರಣೆಯಿಂದ ಇಟಲಿಯ ಎಲ್ಲ ರಾಜ್ಯಗಳೂ ಪ್ರಭಾವಿತಗೊಂಡುವು. ಆರ್ಥಿಕ ಮತ್ತು ಹಣಕಾಸಿನ ಪರಿಸ್ಥಿತಿಗಳ ಪುನರ್ರಚನೆಗೆ ಪ್ರಯತ್ನಗಳು ನಡೆದುವು. ಟಸ್ಕನಿಯಲ್ಲಿ ಗ್ರಾಂಡ್ ಡ್ಯೊಕ್ ಲಿಯೊಪಾಲ್ಸ್ ನೆರಿ ಮತ್ತು ಟಾವಂಟಿ, ಪರ್ಮಾದಲ್ಲಿ ಟಿಲ್ಲಾಟ್ ಮತ್ತು ಸವಾಯ್‍ನಲ್ಲಿ ಹಾಗೂ ಸಾರ್ಡಿನಿಯಗಳಲ್ಲಿ ಮೂರನೆ ಚಾರಲ್ಸ್ ಇಮ್ಮಾನ್ಯುಯಲ್ ಮತ್ತು ಸವಾಯಲ್ಲಿ ಒರ್ಮಿಯಾ-ಇವರು ತಮ್ಮ ತಮ್ಮ ರಾಜ್ಯಗಳಲ್ಲಿ ಸುಧಾರಣಾಕಾರ್ಯಗಳನ್ನು ಉತ್ತಮವಾಗಿ ನಡೆಸಿದರು. ಇಟಲಿ ಬಹುದೀರ್ಘಕಾಲದ ಸುಪ್ತಾವಸ್ಥೆಯಿಂದ ಚೇತನಗೊಂಡಿತು. ಹಳೆಯ ರೀತಿಗಳ ಮೇಲೆ ಹೊಸರೀತಿಯ ಜೀವನ ಆಕ್ರಮಣ ನಡೆಸಿತು. ರಾಷ್ಟ್ರೀಯ ಪುನರುಜ್ಜೀವನದ ಮಾರ್ಗ ತೆರೆಯಬೇಕಾದಲ್ಲಿ ಈ ಪುರಾತನ ಮಾರ್ಗಗಳು ನಾಶವಾದುವು. 

ಇಟಲಿಯ ಏಕೀಕರಣ : ಫ್ರಾನ್ಸಿನ ನೆಪೋಲಿಯನ್ ಬೋನೋಪಾರ್ಟ್ ಆಲ್ಪ್ಸ್‍ನ ದಕ್ಷಿಣಕ್ಕೆ ತಿರುಗಿ ಇಟಲಿಯ ಪರ್ಯಾಯದ್ವೀಪವನ್ನು ಪ್ರವೇಶಿಸಿದಾಗ ದೇಶದ ಹಳೆಯ ವ್ಯವಸ್ಥೆಗಳೆಲ್ಲ ಬುಡಮೇಲಾದುವು. ಮುಂದೆ ಅವನು ಫ್ರೆಂಚ್ ದಾಳಿಗಳನ್ನು ಈಜಿಪ್ಟಿನಲ್ಲಿ ಮುಂದುವರಿಸಿದ ಸಲುವಾಗಿ ಸ್ವದೇಶಕ್ಕೆ ಹೋದ. ಆದರೆ ಅನಂತರವೂ ಫ್ರೆಂಚರ ಆಕ್ರಮಣ ಇಟಲಿಯಲ್ಲಿ ಮುಂದುವರಿಯಿತು. ಎಲ್ಲೆಲ್ಲೂ ಫ್ರೆಂಚರಿಂದ ಬಂದ ಸ್ವಾತಂತ್ರ್ಯ ಸಮಾನತೆ ಸೋದರತೆಗಳ ಮಾತು ಹರಿದಾಡಿತು. ಇಟಾಲಿಯನ್ನರು ಮೊದಲು ಫ್ರೆಂಚರ ವಿಚಾರದಲ್ಲಿ ಆಶಾಭಾವನೆ ತಳೆದಿದ್ದರು. ಆಮೇಲೆ ಅವರ ಬಗ್ಗೆ ಕ್ರೋಧಭಾವ ತಳೆದರು, ಬೋನೋಪಾರ್ಟ್ 1894ರಲ್ಲಿ ಸಾಮ್ರಾಟನಾದಾಗ, ಸಿಸಾಲ್ಟೈನ್ ಗಣರಾಜ್ಯವೇ ಇಟಲಿ ಗಣರಾಜ್ಯವಾಯಿತು. 1806ರಲ್ಲಿ ವೆನಿಸ್ ಹೊಸ ಸಾಮ್ರಾಜ್ಯಕ್ಕೆ ಸೇರಿತು. ಪೀಡಿಮಾಂಟ್, ಟಸ್ಕನಿ ಮತ್ತು ಅಪೆನೈನ್‍ಗಳ ಪಶ್ಚಿಮಕ್ಕಿದ್ದ ಪೋಪ್ ರಾಜ್ಯಗಳು ಫ್ರೆಂಚ್ ಸಾಮ್ರಾಜ್ಯ ಸೇರಿದುವು. ನೇಪಲ್ಸ್ ಸ್ವತಂತ್ರ ರಾಜ್ಯವಾಯಿತು. ಸಿಸಿಲಿ ಫ್ರೆಂಚ್ ಹತೋಟಿಗೊಳಗಾಗದೆ ಸ್ವತಂತ್ರರಾಜ್ಯವಾಗಿ ಉಳಿಯಿತು. ಬಹು ಹಿಂದಿನ ಕಾಲದಿಂದ ಇದ್ದ ಅನೇಕ ಪದ್ದತಿಗಳು ಫ್ರ್ರೆಂಚರ ಆಳ್ವಿಕೆಯ ಕಾಲದಲ್ಲಿ ಕಣ್ಮರೆಯಾದುವು. ಆದರೆ ಕೆಲವು ಅಭಿವೃದ್ಧಿಯ ಕ್ರಮಗಳನ್ನು ಕೈಗೊಳ್ಳಲಾಯಿತು. ಇಟಲಿಯ ಮೇಲೆ ಕೆಂಪು, ಬಿಳಿ ಮತ್ತು ಹಸಿರುವರ್ಣದ ಧ್ವಜ ಹಾರಾಡಲಾರಂಭಿಸಿತು. ಇದೇ ಮುಂದೆ ಇಟಲಿಯ ಏಕೀಕರಣಕ್ಕೆ ಸ್ಫೂರ್ತಿ ನೀಡಿತು. 1815ರ ವಿಯೆನ್ನದ ಕಾಂಗ್ರೆಸಿನಿಂದ ಹಳೆಯ ಇಟಲಿ ರಾಜ್ಯ ಸ್ಥಾಪಿತವಾಯಿತು. ಆಸ್ಟ್ರಿಯನ್ ಚಾನ್ಸಲರ್ ಆದ ಮೆಟ್ಟರ್ನಿಕ್ ವಿಯೆನ್ನದ ಪ್ರಮುಖ ರಾಜಕಾರಣಿಯಾಗಿದ್ದ. ನೆಪೋಲಿಯನ್ನನ ಅಪಜಯದ ಅನಂತರ ಯೂರೋಪಿನ ವ್ಯವಹಾರಗಳನ್ನು ಸರಿಪಡಿಸುವುದರಲ್ಲಿ ಮುಖ್ಯ ಪಾತ್ರವಹಿಸಿದ್ದ. ಇಟಲಿ ಹಾಗೂ ಜರ್ಮನಿಗಳ ಸಮಸ್ಯೆಗಳ ಬಗ್ಗೆಯೂ ಇವನು ಆಸಕ್ತಿ ವಹಿಸಿದ್ದ. ಪೋಪ್‍ರಾಜ್ಯವಾದ ಮ್ಯಾಸಿರಾಟಾದಲ್ಲಿ 1817ರಲ್ಲಿ ಸಂಭವಿಸಿದ ಪ್ರಥಮ ಕ್ರಾಂತಿ ನಗೆಪಾಲಿಗೀಡಾಯಿತು. 1820ರಲ್ಲಿ ಮತ್ತೊಂದು ಕ್ರಾಂತಿ ನಡೆಯಿತು.

ದಂಗೆಗಳನ್ನಡಗಿಸುವುದರಲ್ಲಿ ಮೆಟ್ಟರ್ನಿಕ್ ಯಶಸ್ವಿಯಾದ. ಇವನ ಆಳ್ವಿಕೆಯ ಮುಂದಿನ ಹತ್ತು ವರ್ಷಗಳ ಕಾಲದಲ್ಲಿ ಯಾವ ರೀತಿಯ ದಂಗೆಗಳೂ ಸಂಭವಿಸಲಿಲ್ಲ. ಜರ್ಮನ್ ರಾಜ್ಯಗಳಂತೆಯೇ ಇಟಲಿಯ ಪ್ರಮುಖ ಕ್ರಾಂತಿಕಾರಿಗಳು ದೇಶಭ್ರಷ್ಟರಾಗಿ ಪ್ಯಾರಿಸ್ಸಿನಲ್ಲಿ ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದರು. 

ಮ್ಯಾಟ್ಜಿನಿಯ ಕನಸು : 1830ರ ಫ್ರೆಂಚ್ ಕ್ರಾಂತಿ ಇಟಲಿಗೂ ಸ್ಫೂರ್ತಿನೀಡಿತು. ಪ್ಯಾರಿಸಿನಿಂದ ದೊಡ್ಡಪ್ರಮಾಣದಲ್ಲಿ ಕ್ರಾಂತಿಯನ್ನು ನಿಯೋಜಿಸಲಾಯಿತು; ಮತ್ತು ಪೋಪ್ ಅಧಿಕಾರಿಗಳನ್ನು ಹೊರಹಾಕಿದ್ದ ರಿಮಿನಿ, ಬೊಲೊನಾ ಮತ್ತು ಪೆರುಗಿಯಗಳಲ್ಲಿ 1831ರಲ್ಲಿ ದಂಗೆಯ ಸಂಚು ನಡೆದಿತ್ತು. ಈ ಅಂತಿಕ ಕ್ಷೋಭೆಯ ನಡುವೆ ಆಸ್ಟ್ರಿಯನ್ ಆಕ್ರಮಣ ನಡೆಯಿತು. 
ಜೊಸೆಪ್ಪ ಮ್ಯಾಟ್ಜಿನಿ ಹೊಸ ಚಳವಳಿಯನ್ನಾರಂಭಿಸಿದ (ನೋಡಿ- ಮ್ಯಾಟ್ಜಿನಿ,-ಜೂಸೆಪ್ಪ). ಇಟಲಿಯ ಐಕ್ಯ ಸಾಧಿಸಿ ಅದನ್ನು ಸಂಪೂರ್ಣವಾಗಿ ಸ್ವತಂತ್ರಗೊಳಿಸಲು ಸರಳ ಮಾರ್ಗಗಳನ್ನು ಸೂಚಿಸಿದ. 1831ರಲ್ಲಿ ಸಾರ್ಡಿನಿಯದ ಹೊಸ ದೊರೆ ಚಾರಲ್ಸ್ ಆಲ್ಬರ್ಟನನ್ನು ಐಕ್ಯ ಚಳವಳಿಯ ನಾಯಕತ್ವ ವಹಿಸಲು ಕೇಳಿಕೊಂಡ. ಆದರೆ ಅನಂತರ ಇಡೀ ಪರ್ಯಾಯ ದ್ವೀಪವನ್ನು ಸ್ವತಂತ್ರಗೊಳಿಸಿ, ಏಕೀಕರಣಗೊಳಿಸಿ, ಗಣರಾಜ್ಯವನ್ನು ಸ್ಥಾಪಿಸಲು ಮೀಸಲಾಗಿದ್ದ ಯಂಗ್ ಇಟಲಿ ಸಂಸ್ಥೆಯನ್ನು ಸ್ಥಾಪಿಸಿದ. ಯಾವ ರಾಜನನ್ನೂ ನಂಬಕೂಡದು; ಯಾವ ಸಣ್ಣ ರಾಜ್ಯವನ್ನೂ ಬಿಡಕೂಡದು; ಕರ್ತವ್ಯನಿಷ್ಠೆ, ತ್ಯಾಗ, ಜನತೆಯ ಪುನಶ್ಚೇತನ, ಇವೇ ಸೂಕ್ತ ಮಾರ್ಗಗಳು-ಎಂದು ಈತ ಸಾರಿದ. ಮ್ಯಾಟ್ಜಿನಿಯ ತತ್ತ್ವಗಳನ್ನು ಸಾವಿರಾರು ವೈಯಕ್ತಿಕ ಪತ್ರಗಳ ಮೂಲಕ ಹಾಗೂ ಯಂಗ್ ಇಟಲಿಯ ಗುಪ್ತ ಪತ್ರಿಕೆಗಳ ಮೂಲಕ ಪ್ರಸಾರ ಮಾಡಲಾಗುತ್ತಿತ್ತು. 

ರಾಷ್ಟ್ರೀಯ ಚಳವಳಿಯಲ್ಲಿ ಮ್ಯಾಟ್ಜಿನಿಯ ಯಂಗ್ ಇಟಲಿಯ ಅಕಾಂಕ್ಷೆಯ ಪರಿಣಾಮವನ್ನೂ ಅದರ ಅಗಾಧವಾದ ಪ್ರಚಾರಕಾರ್ಯವನ್ನೂ ವಿವರಿಸುವುದು ಅಸಾಧ್ಯ. ಮ್ಯಾಟ್ಜಿನಿ ಬೋಧಕ ಹಾಗೂ ಪ್ರವಾದಿಯ ಕಾರ್ಯ ನಡೆಸಿದ. 1848, 1860 ಮತ್ತು 1870ರಲ್ಲಿ ರಾಜರುಗಳನ್ನು ಸೈನಿಕ ಹಾಗೂ ರಾಯಭಾರ ಘಟನೆಗಳ ಮೂಲಕ ಪದಚ್ಯುತಗೊಳಿಸಿದಾಗ ಮ್ಯಾಟ್ಜಿನಿಯ ಅನುಯಾಯಿಗಳಾಗಿ ಏಕತೆಯನ್ನು ಬೋಧಿಸುತ್ತಿದ್ದ ಉತ್ಸಾಹಿಗಳನೇಕರಿದ್ದರು. 

ಈ ಕಾಲದಲ್ಲಿಯೇ ಸ್ವಾತಂತ್ರ್ಯ ಹಾಗೂ ಏಕೀಕರಣಕ್ಕಾಗಿ ಪ್ರೇರೇಪಿಸುತ್ತಿದ್ದ ಅಪ್ರತ್ಯಕ್ಷ ಶಕ್ತಿಗಳೂ ಇದ್ದುವು. ಸ್ವಲ್ಪ ಮಟ್ಟಿಗೆ ಸ್ವಾತಂತ್ರ್ಯ ಹೊಂದಿದ್ದ ಪೀಡ್ ಮಾಂಟ್ ಮತ್ತು ಟಸ್ಕನಿಯ ಪತ್ರಿಕೆಗಳಲ್ಲಿ ಕೈಗಾರಿಕೆ, ವ್ಯವಸಾಯ ಮತ್ತು ವಾಣಿಜ್ಯಾಭಿವೃದ್ಧಿಯ ಬಗ್ಗೆ ಅನೇಕ ವಿಚಾರಗಳೂ ಪ್ರಕಟಗೊಳ್ಳುತ್ತಿದ್ದುವು. ಕೈಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿದ್ದ ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆಸ್ಟ್ರಿಯನ್ನರನ್ನು ಹೊಡೆದೋಡಿಸಲು ಒಂದು ಸೈನ್ಯ ಶಕ್ತಿಯ ಅವಶ್ಯಕತೆಯಿತ್ತು. ಅವರನ್ನು ಹೊರಗೋಡಿಸಿದ್ದಲ್ಲದೆ ಇಟಲಿಯ ಪುನರುದ್ಧಾರ ಸಾಧ್ಯವಿರಲಿಲ್ಲ. 

1848ರ ಚಳವಳಿಯ ಪ್ರತಿಧ್ವನಿ ರೋಮಿನಲ್ಲಿ ಕೇಳಿಬರುತ್ತಿತ್ತು. 1846ರ ಜೂನ್ ಹದಿನಾರನೆಯ ದಿನದಂದು ಗ್ರಿಗರಿಯ ಉತ್ತರಾಧಿಕಾರಿಯಾಗಿ ಒಂಬತ್ತನೆಯ ಪಯಸ್ ಪೋಪ್ ಬಂದ. 1848ರ ಆರಂಭದ ವೇಳೆಗೆ, 1830ರ ಫ್ರೆಂಚ್ ಸಂವಿಧಾನದ ಮಾದರಿಯ ಸಂವಿಧಾನಕ್ಕೆ ಬೇಡಿಕೆ ಸಾಮಾನ್ಯವಾಗಿದ್ದು, ಟ್ಯುರಿನ್, ಫ್ಲಾರೆನ್ಸ್, ರೋಮ್ ಮತ್ತು ನೇಪಲ್ಸ್‍ಗಳಲ್ಲಿ ಆ ವರ್ಷದ ಮಾರ್ಚ್ ವೇಳೆಗೆ ಆ ರೀತಿಯ ಸಂವಿಧಾನ ಆಚರಣೆಯಲ್ಲಿತ್ತು. ಆದರೆ ಯೂರೋಪಿನಲ್ಲಿ ಘಟನೆಗಳು ಬಹು ತ್ವರಿತಗತಿಯಲ್ಲಿ ಸಾಗುತ್ತಿದ್ದುವು. ಲೊಯಿ ಫಿಲಿಪ್ ಪದಚ್ಯುತನಾಗಿದ್ದ. ಫೆಬ್ರವರಿಯಲ್ಲಿ ಎರಡನೆಯ ಫ್ರೆಂಚ್ ಗಣರಾಜ್ಯದ ಸ್ಥಾಪನೆಯಾಗಿತ್ತು. ಮಾರ್ಚ್ ತಿಂಗಳಲ್ಲಿ ವಿಯೆನ್ನದಲ್ಲಿನ ಕ್ರಾಂತಿಯಿಂದ ಮೆಟ್ಟರ್ನಿಕನನ್ನು ಹೊರಗೋಡಿಸಿದ್ದು ಇವೆಲ್ಲಕ್ಕಿಂತ ಮುಖ್ಯವಾದದ್ದು. ಇದರ ಪರಿಣಾಮ ಇಟಲಿಯ ಮೇಲೂ ಉಂಟಾಗಿತ್ತು. ಮಿಲಾನ್‍ನಲ್ಲಿ ಜನ ಎಚ್ಚೆತ್ತುಕೊಂಡಿದ್ದರು. ಐದು ದಿನಗಳ ಹೋರಾಟದಲ್ಲಿ ಅವರು ಆಸ್ಟ್ರಿಯನ್ನರನ್ನು ಪದಚ್ಯುತರನ್ನಾಗಿ ಮಾಡಿದರು. ವೆನಿಸ್ ಮಿಲಾನನ್ನು ಅನುಸರಿಸಿತು. ಎಲ್ಲೆಲ್ಲಿಯೂ ಆಸ್ಟ್ರಿಯನ್ನರ ವಿರುದ್ಧ ಧರ್ಮಯುದ್ಧ ನಡೆಯಿತು. 

ದಂಗೆಗಳನ್ನಡಗಿಸುವುದರಲ್ಲಿ ಮೆಟ್ಟರ್ನಿಕ್ ಯಶಸ್ವಿಯಾದ. ಇವನ ಆಳ್ವಿಕೆಯ ಮುಂದಿನ ಹತ್ತು ವರ್ಷಗಳ ಕಾಲದಲ್ಲಿ ಯಾವ ರೀತಿಯ ದಂಗೆಗಳೂ ಸಂಭವಿಸಲಿಲ್ಲ. ಜರ್ಮನ್ ರಾಜ್ಯಗಳಂತೆಯೇ ಇಟಲಿಯ ಪ್ರಮುಖ ಕ್ರಾಂತಿಕಾರಿಗಳು ದೇಶಭ್ರಷ್ಟರಾಗಿ ಪ್ಯಾರಿಸ್ಸಿನಲ್ಲಿ ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದರು. 

	ಮ್ಯಾಟ್ಜಿನಿಯ ಕನಸು : 1830ರ ಫ್ರಂಚ್ ಕ್ರಾಂತಿ ಇಟಲಿಗೂ ಸ್ಫೂರ್ತಿನೀಡಿತು. ಪ್ಯಾರಿಸಿನಿಂದ ದೊಡ್ಡಪ್ರಮಾಣದಲ್ಲಿ ಕ್ರಾಂತಿಯನ್ನು ನಿಯೋಜಿಸಲಾಯಿತು; ಮತ್ತು ಪೋಪ್ ಅಧಿಕಾರಿಗಳನ್ನು ಹೊರಹಾಕಿದ್ದ ರಿಮಿನಿ, ಬೊಲೊನಾಮತ್ತು ಪೆರುಗಿಯಗಳಲ್ಲಿ 1831ರಲ್ಲಿ ದಂಗೆಯ ಸಂಚು ನಡೆದಿತ್ತು. ಈ ಅಂತಿಕ ಕ್ಷೋಭೆಯ ನಡುವೆ ಆಸ್ಟ್ರಿಯನ್ ಅಕ್ರಮಣ ನಡೆಯಿತು. 

ಉತ್ತರದಲ್ಲಿ ಆಸ್ಟ್ರಿಯನ್ನರು ಹಾಗೂ ಪೀಡ್‍ಮಾಂಟೀಸ್‍ಗಳ ನಡುವೆ ಯುದ್ಧ ಮುಂದುವರಿಯುತ್ತಿದ್ದಾಗ ತೀವ್ರವಾದಿಗಳು ರೋಮ್ ಮತ್ತು ಫ್ಲಾರೆನ್ಸ್‍ಗಳನ್ನು ವಶಮಾಡಿಕೊಂಡರು. ಕ್ರೈಸ್ತ ರಾಷ್ಟ್ರವೊಂದರ ಮೇಲೆ ಯುದ್ಧ ಘೋಷಿಸಲು ಒಂಬತ್ತನೆಯ ಪೋಪ್ ವಯಸ್ ನಿರಾಕರಿಸಿದ್ದರಿಂದ ಜನಪ್ರಿಯತೆಯನ್ನು ಕಳೆದುಕೊಂಡ. ಯಂಗ್ ಇಟಲಿಯಿಂದ ಸ್ಫೂರ್ತಿಗೊಂಡ ಮಾಟ್ಜಿನಿಯನ್ನರು ಪ್ರಭಾವ ಗಳಿಸಿಕೊಂಡರಲ್ಲದೆ ರೋಮ್‍ನಲ್ಲಿ ಒಂದು ಗಣರಾಜ್ಯ ಸ್ಥಾಪನೆ ಮಾಡಿ ಏಕೀಕರಣ ಸಾಧಿಸ ಬಯಸಿದರು. ಪೋಪ್ ಪಯಸ್ ನಗರತ್ಯಾಗ ಮಾಡಿದ. 

ಈ ರೀತಿಯಲ್ಲಿ 1849ರಲ್ಲಿ ರೋಮ್, ಫ್ಲಾರೆನ್ಸ್ ಮತ್ತು ವೆನಿಸ್‍ನಗರಗಳಲ್ಲಿ ಗಣರಾಜ್ಯಗಳ ಸ್ಥಾಪನೆಯಾಯಿತು. ಟಸ್ಕನಿ ಆಸ್ಟ್ರಿಯನ್ನರಿಗೆ ಸೋತು ಗ್ರಾಂಡ್ ಡ್ಯೊಕ್ ಲಿಯೊಪಾಲ್ಡನನ್ನು ಮತ್ತೆ ಸೇರಿಸಿಕೊಳ್ಳಬೇಕಾಯಿತು. ಆದರೆ 1849ರ ಜುಲೈ ವರೆಗೆ ರೋಮನ್ ಗಣರಾಜ್ಯ ಪ್ರತಿಬಂಧಕವನ್ನೊಡ್ಡಿತು. ಮ್ಯಾಟ್ಜಿನಿಯ ರೋಮ್ ಗಣರಾಜ್ಯ ಕೆಥೊಲಿಕ್ ರಾಷ್ಟ್ರಗಳ ಒತ್ತಡವನ್ನು ತಡೆದುಕೊಂಡಿತ್ತು. ಮುನ್ನುಗ್ಗುತ್ತಿದ್ದ ಆಸ್ಟ್ರಿಯ, ಫ್ರಾನ್ಸ್, ನೇಪಲ್ಸ್ ಮತ್ತು ಸ್ಪೇನ್‍ಗಳ ಸೈನ್ಯಗಳನ್ನು ಧೈರ್ಯದಿಂದ ಎದುರಿಸಿತು. ಈ ರಾಜ್ಯಗಳೆಲ್ಲವೂ ಪೋಪನನ್ನು ಮತ್ತೆ ಅಧಿಕಾರಕ್ಕೆ ತರಲು ಬಯಸುತ್ತಿದ್ದವು. ಫ್ರೆಂಚರು ಮೊದಲು ಆಗಮಿಸಿದರೂ ಗಾರಿಬಾಲ್ಡಿ ಅವರನ್ನು ಒಂದು ತಿಂಗಳ ಕಾಲ ತಡೆದಿದ್ದ. ಆದರೆ ಮುಂದಿನ ಒಂದು ತಿಂಗಳಲ್ಲಿ ವೆನಿಸ್ ಶರಣಾಗತವಾಯಿತು. 
1834ರಲ್ಲಿ ಕ್ರಾಂತಿಯ ಪ್ರಮುಖ ನಾಯಕರು ದೇಶದ ಗಡಿಯಾಚೆ ಹೊರಟು ಹೋದರು. ಗಾರಿಬಾಲ್ಡಿ ಅಮೆರಿಕಕ್ಕೆ, ಮತ್ತು ಮ್ಯಾಟ್ಜಿಜಿ ಲಂಡನ್ನಿಗೆ ಹೋದರು. 1848ರ ಮತ್ತು 1849ರ ಘಟನೆಗಳಿಂದ, ರಿಸಾರ್ಜಿಮೆಂಟೊವಿನ ಬೆನ್ನೆಲುಬಾಗಿದ್ದ ಮಧ್ಯಮ ವರ್ಗದ ಜನರ ಮೇಲೆ ಮಹತ್ತರವಾದ ಪರಿಣಾಮವುಂಟಾಗಿತ್ತು. ಆಸ್ಟ್ರಿಯ ತೊಲಗಬೇಕಿತ್ತು. ಪೋಪನ ಲೌಕಿಕ ಆಡಳಿತವೂ ರಾಜರುಗಳೂ ಹೋಗಬೇಕಿತ್ತು.

ಇಟಲಿಯ ಸ್ವಾತಂತ್ರ್ಯ ಹೋರಾಟ ನಡೆಸುವ ಅವಕಾಶವನ್ನು ಸಾರ್ಡಿನಿಯದ ದೊರೆ ಸದುಪಯೋಗಪಡಿಸಿಕೊಂಡ. ಮೊದಲು ಡಿ ಅಜೆಗ್ಲಿಯೊನಿಂದಲೂ ಆಮೇಲೆ (1852ರ ಅನಂತರ) ತನ್ನ ಹೊಸ ಪ್ರಧಾನಿ ಕೌಂಟ್ ಕ್ಯಾಮಿಲ್ಲೊ ಕ್ಯಾವರ್‍ನಿಂದಲೂ ಮಾರ್ಗದರ್ಶನ ಪಡೆದ. ಈ ಸಣ್ಣ ರಾಜ್ಯದ ಸೈನಿಕ ದುರ್ಬಲತೆಯಿಂದ ಸರ್ಕಾರ ಬಹು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿತ್ತು. ಮತ್ತು ಇಟಲಿಯ ಗಣ್ಯರಲ್ಲನೇಕರು ಲಂಬಾರ್ಮಿಯಲ್ಲಿ 1853ರಲ್ಲಿ ಮತ್ತು ಜಿನೋವಾದಲ್ಲಿ 1857ರಲ್ಲಿ ಮ್ಯಾಟ್ಜಿನಿಯನ್ ಬಂಡಾಯ ವಿಫಲವಾಯಿತೆಂದುದನ್ನು ಮನಗಂಡಿದ್ದರು. 

ಕ್ಯಾವರ್ ಆ ಕಾಲದ ಐರೋಪ್ಯ ರಾಜಕಾರಣಿಗಳಲ್ಲಿ ಅತ್ಯಂತ ಸಮರ್ಥನಾಗಿದ್ದ. ಫ್ರಾನ್ಸಿನ ಪ್ರಾಯೋಗಿಕ ಬೆಂಬಲವೂ ಬ್ರಿಟನ್ನಿನ ನೈತಿಕ ಬೆಂಬಲವೂ ಇವನಿಗೆ ಅವಶ್ಯಕವಾಗಿತ್ತು. ಅವೆರಡನ್ನೂ ತಾನು ಪಡೆಯುವುದು ಮಹತ್ಸಾಧನೆಯೆಂದು ಇವನು ತಿಳಿದಿದ್ದ. ಇವನಿಗೆ ಫ್ರಾನ್ಸಿಗಿಂತ ಇಂಗ್ಲೆಂಡಿನ ಬಗ್ಗೆ ಹೆಚ್ಚಿನ ನಂಬಿಕೆಯಿತ್ತು. ಪೀಡ್‍ಮಾಂಟ್ ಅನುಸರಿಸಿದ್ದ ಇಂಗ್ಲಿಷ್ ಪಾರ್ಲಿಮೆಂಟರಿ ವಿಧಾನದ ಬಗ್ಗೆ ಇವನಿಗೆ ನಂಬಿಕೆಯಿತ್ತು. ಆದರೆ ಇಂಗ್ಲೆಂಡಿಗಿಂತ ಫ್ರಾನ್ಸಿನ ಬೆಂಬಲದ ಅವಶ್ಯಕತೆ ಹೆಚ್ಚಿನದಿತ್ತು ಎಂಬುದನ್ನು ಅರಿತ್ತಿದ್ದ. ಏಕೆಂದರೆ ಆಸ್ಟ್ರಿಯನ್ನರನ್ನು ಸೋಲಿಸುವ ಸೈನಿಕ ಶಕ್ತಿ ಫ್ರಾನ್ಸಿನವರಲ್ಲಿ ಮಾತ್ರವಿದೆ ಎಂಬುದನ್ನೂ ಅರಿತ್ತಿದ್ದ. ಗಾರಿಬಾಲ್ಡಿಯಿಂದ ಅಪನಂಬಿಕೆಗೆ ಗುರಿಯಾಗಿದ್ದ ಮತ್ತು ಮ್ಯಾಟ್ಜಿನಿಯಿಂದ ತಿರಸ್ಕøತನಾಗಿದ್ದ ಆತ ಎಂಟುವರ್ಷಗಳ ವಿಶೇಷ ರಾಯಭಾರ ಪ್ರಯತ್ನದಿಂದ ಕೊನೆಗೂ ಯಶಸ್ಸು ಗಳಿಸಿದ. 

ಕ್ಯಾವರ್ ಪಶ್ಚಿಮ ರಾಷ್ಟ್ರಗಳ ವಿಶ್ವಾಸ ಪಡೆಯುವುದರಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟ. 1854ರ ಡಿಸೆಂಬರಿನಲ್ಲಿ ಕ್ರಿಮಿಯನ್ ಯುದ್ಧದಲ್ಲಿ ಫ್ರಾನ್ಸ್ ಹಾಗೂ ಇಂಗ್ಲೆಂಡ್‍ಗಳೊಡನೆ ಸಾಧಿಸಿದ ಮಿತ್ರತ್ವ ಮುಖ್ಯವಾದದ್ದು. ಇಟಲಿಯವರಿಗೆ ಕ್ರಿಮಿಯದಲ್ಲಿ ಆಸಕ್ತಿಯಿರಲಿಲ್ಲ. ಆದರೂ ಆತನ ಸೇನೆ ಸ್ತುತ್ಯಾರ್ಹಸೇವೆ ಸಲ್ಲಿಸಿತು. 1856ರ ಪ್ಯಾರಿಸ್ ಶಾಂತಿ ಸಮ್ಮೇಳನದಲ್ಲಿ ಇಟಲಿಯ ದುಸ್ಥಿತಿಯನ್ನು ಕ್ಯಾವರ್ ವರ್ಣಿಸಿದಾಗ, ಇವನಿಗೆ ಪಶ್ಚಿಮದ ರಾಷ್ಟ್ರಗಳ ನೈತಿಕ ಬೆಂಬಲ ದೊರಕಿತು. 1858ರ ಜುಲೈನಲ್ಲಿ ಮೂರನೆಯ ನೆಪೋಲಿಯನ್ನನನ್ನು ಕ್ಯಾವರ್ ಸಂಧಿಸಿ, ಆಸ್ಟ್ರಿಯದ ವಿರುದ್ಧ ಹೋರಾಡಲು ಅವನ ಬೆಂಬಲ ಪಡೆದ. ಸ್ವಯಂಸೇವಕ ರಾಷ್ಟ್ರ ಪ್ರೇಮಿಗಳು ಗಾರಿಬಾಲ್ಡಿಯ ನಾಯಕತ್ವದಲ್ಲಿ, ಆಸ್ಟ್ರಿಯವನ್ನು ಯುದ್ಧಕ್ಕೆ ಪ್ರೇರೇಪಿಸಿ, ನೆಪೋಲಿಯನ್ ತನ್ನ ಮಾತನ್ನುಳಿಸಿಕೊಳ್ಳುವಂತೆ ಮಾಡಬೇಕಿತ್ತು. ಇಂಗ್ಲೆಂಡ್ ಯೂರೋಪಿನಲ್ಲಿ ನೆಪೋಲಿಯನ್ನನ ಉತ್ಕಟಾಕಾಂಕ್ಷೆಗಳು ನೆರವೇರದಿರಲು ಪ್ರಯತ್ನಿಸಿ, ಯುದ್ಧವನ್ನು ತಡೆಗಟ್ಟಲು ಪ್ರಯತ್ನಿಸುತ್ತಿತ್ತು. ಕ್ಯಾವರನ ಕಾತರ ಹೆಚ್ಚಿತ್ತು. ಪ್ರಷ್ಯ ರಷ್ಯಗಳೆರಡೂ ಹೊಸ ರಾಜನ ಬಗ್ಗೆ ಸಂಶಯ ಭಾವನೆ ಹೊಂದಿದ್ದುವು. ಈ ಸಂಚಿನ ವಿರುದ್ಧ ಫ್ರಾನ್ಸಿನ ಕೆಥೊಲಿಕರ ಒಪ್ಪಿಗೆಯಿರಲಿಲ್ಲ. 1859ರ ಏಪ್ರಿಲಿನಲ್ಲಿ ಆಸ್ಟ್ರಿಯ ಪೀಡ್‍ಮಾಂಟ್‍ಗೆ ಕೊನೆಯೆಚ್ಚರಿಕೆ ನೀಡಿತು. ಉತ್ತರ ಇಟಲಿಯಲ್ಲಿ ಮತ್ತೊಮ್ಮೆ ಫ್ರೆಂಚ್ ಸೇನೆ ಆಗಮಿಸಿ ಆಸ್ಟ್ರಿಯವನ್ನು ಸೋಲಿಸಿತು. ಯುದ್ಧ ಕಳೆದ ಎರಡು ವಾರಗಳ ಅನಂತರ ಯುದ್ಧವಿರಾಮಕ್ಕೆ ಸಹಿ ಬಿತ್ತು. ಕ್ಯಾವರ್ ರಾಜೀನಾಮೆ ನೀಡಿದನಾದರೂ ಟ್ಯುರಿನ್‍ನಲ್ಲಿ ಮತ್ತೆ ಅಧಿಕಾರಕ್ಕೆ ಬಂದ. 1860ರ ಮೊದಲ ಭಾಗದ ವೇಳೆಗೆ ಇಟಲಿಯ ಸಾಮ್ರಾಜ್ಯವೊಂದು ಉತ್ತರದಲ್ಲಿ ಸ್ಥಾಪಿತವಾಗಿತ್ತು. ಆದರೆ ಆಸ್ಟ್ರಿಯದ ವಶದಲ್ಲಿ ವೆನಿಷಿಯ ಇತ್ತು. ಉತ್ತರ ಮತ್ತು ಪೂರ್ವದಲ್ಲಿ ಪೋಪಧಿಕಾರದ ರಾಜ್ಯಗಳಿದ್ದುವು. ಈ ಪರ್ಯಾಯದ್ವೀಪದ ಏಕತೆಯನ್ನು ಸಾಧಿಸಲು ಗಾರಿಬಾಲ್ಡಿಯೂ ನೆರವಾದ. 1860ರ ಮೇನಲ್ಲಿ ಸಾವಿರ ಜನ ಕೆಂಪು ಅಂಗಿಯವರು ಜಿನೋವದ ಬಳಿ ಇರುವ ಕ್ವಾರ್ಟೊದಿಂದ ಸಿಸಿಲಿಗೆ ಯಾನ ಮಾಡಿದಾಗ ಈ ಕಾರ್ಯ ಪೂರೈಸಿತು. ಈ ಬಾರಿ ಮೆಡಿಟರೇನಿಯನ್ನನ್ನು ಹತೋಟಿಯಲ್ಲಿಟ್ಟುಕೊಂಡಿದ್ದ ಇಂಗ್ಲೆಂಡಿನ ಬೆಂಬಲ ಅತ್ಯವಶ್ಯಕವಾಗಿತ್ತು. ಫ್ರಾನ್ಸಿನ ಮೇಲೆ ಹೆಚ್ಚು ಅವಲಂಬಿತವಾಗದೆ ಇಟಲಿ ಏಕೀಕರಣಗೊಂಡದ್ದು ಇಂಗ್ಲಿಷ್ ರಾಯಭಾರಿಗೆ ಒಪ್ಪಿಗೆಯಾಗಿದ್ದದ್ದರಿಂದ ಮತ್ತು ಬ್ರೌನಿಂಗ್ ಹಾಗೂ ಇತರ ಲೇಖಕರ ಪ್ರಭಾವದಿಂದ ಇಟಲಿಯ ಪರವಾಗಿ ಇಂಗ್ಲೆಂಡ್ ಮುಂದೆ ಬಂತು. 

ಸಿಸಿಲಿಯ ಮೂಲಕ ಗರಿಬಾಲ್ಡಿ ಬಹು ತ್ವರಿತಗತಿಯಿಂದ ಮುನ್ನುಗ್ಗಿದ. ಆಗಸ್ಟ್‍ನಲ್ಲಿ ಮುಖ್ಯ ಭೂಪ್ರದೇಶಕ್ಕೆ ಬಂದ. ಬ್ರಿಟಿಷ್ ಬೆಂಬಲದಿಂದ, ವೆನಿಸ್ ಮತ್ತು ರೋಮ್‍ಗಳೆರಡನ್ನು ಬಿಟ್ಟು, ಕೊನೆಗೆ ಇಟಲಿಯ ಏಕೀಕರಣವಾಯಿತು. 1861ರ ಜೂನ್‍ನಲ್ಲಿ ಹಠಾತ್ತನೆ ಕ್ಯಾವರ್ ಕಾಲವಾದಾಗ ಹೆಚ್ಚಿನ ಕಾರ್ಯ ಮುಗಿದಿತ್ತು. ಆದರೆ ಇಟಲಿ ಎದುರಿಸಬೇಕಾದ ಸಮಸ್ಯೆಗಳು ಅನೇಕವಿದ್ದುವು. ಇಟಲಿಯ ಏಕೀಕರಣ ಹಾಗೂ ಸ್ವಾತಂತ್ರ್ಯ ಚಳವಳಿಯ ಫಲವಾದ ಅಂಥ ವ್ಯಕ್ತಿಯನ್ನು ಇಟಲಿ ಮತ್ತೆ ಪಡೆಯಲಿಲ್ಲ.
ಹೊಸ ರಾಜ್ಯದ ಆರಂಭದ ತೊಂದರೆಗಳು ಕೇವಲ ಏಕೀಕರಣದಿಂದುದ್ಭವಿಸಿದ ತೊಂದರೆಗಳಾಗಿದ್ದುವು. ಆರಂಭದಿಂದಲೂ ಇದು ಅಪಾರವಾದ ಸಾಲದ ಹೊರೆ ಹೊತ್ತಿತ್ತು. ಶಕ್ತಿಯುತ ಭೂಬಲ ಹಾಗೂ ನೌಕಾಬಲದ ಅವಶ್ಯಕತೆಯಿತ್ತು. 

ಮುಂದಿನ ದಶಕದಲ್ಲಿನ ಘಟನೆಗಳು ಇಟಲಿಗೆ ಅಗೌರವ ತರುವಂಥವು. 1862ರ ಬೇಸಿಗೆಯಲ್ಲಿ ಬಂಡಾಯವೊಂದರ ಮೂಲಕ ರೋಮನ್ನು ವಶಪಡಿಸಿಕೊಳ್ಳಲು ಗಾರಿಬಾಲ್ಡಿ ಪ್ರಯತ್ನಿಸಿದ. ಆದರೆ ಪೋಪ್‍ಗೆ ಫ್ರೆಂಚ್ ಗ್ಯಾರಿಸನ್ನಿನ ಬೆಂಬಲವಿತ್ತು. ಈ ದಂಗೆಯನ್ನು ಇಟಲಿಯ ಸರ್ಕಾರ ಅಡಗಿಸಿತು. 1866ರ ಜೂನ್‍ನಲ್ಲಿ ಸೋತುಹೋಯಿತಲ್ಲದೆ ನೌಕಾಸೇನೆ ಏಡ್ರಿಯಾಟಿಕ್‍ನ ಲಿನ್ಸ್‍ದಲ್ಲಿ ಆಸ್ಟ್ರಿಯನ್ ನೌಕಾಸೇನೆಯಿಂದ ಸೋತಿತು. ಆಸ್ಟ್ರಿಯನ್ನರನ್ನು ಸೋಲಿಸಿದ್ದರಿಂದ ವೆನಿಸ್ ಇಟಲಿಯ ವಶವಾಯಿತು. ರೋಮಿನ ಕಥೆಯೂ ಇದೇ ರೀತಿಯಾಗಿದೆ. ಇಟಲಿ ಸರ್ಕಾರದ ಆಜ್ಞೆಗಳ ವಿರುದ್ದ, 1867ರ ಅಕ್ಟೋಬರ್‍ನಲ್ಲಿ ರೋಮನ್ನು ವಶಪಡಿಸಿಕೊಳ್ಳಲು ಗಾರಿಬಾಲ್ಡಿ ಎರಡನೆಯ ಪ್ರಯತ್ನ ಮಾಡಿದ. ಮತ್ತೊಮ್ಮೆ ಫ್ರೆಂಚ್ ಸೈನ್ಯದ ಬೆಂಬಲ ಹೊಂದಿದ್ದ ಪೋಪ್ ಸೈನ್ಯಗಳು ಅವನನ್ನು ಮುಂಟಾನಾದಲ್ಲಿ ಸೋಲಿಸಿದುವು. ಆದಾಗ್ಯೂ ಮೂರೇ ವರ್ಷಗಳ ಅನಂತರ 1870ರಲ್ಲಿ ಫ್ರಾಂಕೊ-ಜರ್ಮನ್ ಯುದ್ಧ ಆರಂಭವಾದಾಗ ಇಟಲಿ ರೋಮನ್ನು ಆಕ್ರಮಿಸಿಕೊಳ್ಳಲು ಸಾಧ್ಯವಾಯಿತು. ರಾಜಕೀಯ ಏಕತೆ ಈಗ ಸಂಪೂರ್ಣಗೊಂಡಿದ್ದು, ಸರ್ಕಾರ 1871ರ ಜೂನ್‍ನಲ್ಲಿ ಫ್ಲಾರೆನ್ಸ್‍ನಿಂದ ರೋಮ್‍ಗೆ ಬಂತು. 

ಸಂವಿಧಾನಬದ್ಧ ರಾಜ್ಯವ್ಯವಸ್ಥೆ : ನಾವು ಇಟಲಿಯನ್ನು ರಚಿಸಿದೆವು. ಈಗ ನಾವು ಇಟಲಿಯ ಜನತೆಯನ್ನು ಸೃಷ್ಟಿಸಬೇಕು. ಎಂದು ಡಿ ಅಜೆಗ್ಲಿಯೊ ಸಾರಿದ. ರಾಜಕೀಯ ಏಕೀಕರಣದ ಅನಂತರ ಹೊಸ ದೇಶ ಎದುರಿಸಬೇಕಾಗಿದ್ದ ಸಮಸ್ಯೆಗಳಲ್ಲಿ ಇದೂ ಒಂದು. ರಾಷ್ಟ್ರೀಯ ಬಂಡಾಯದಲ್ಲಿ ಪಾಲ್ಗೊಂಡಿದ್ದವರು ಬಹು ಕಡಿಮೆ ಜನ. ಗಾರಿಬಾಲ್ಡಿಯ ಸ್ವಯಂಸೇವಕರು ಬಹು ಕಡಿಮೆಯಾಗಿದ್ದರೂ ನೆಪೊಲಿಟನ್ ದೊರೆಗಳ ರಾಜ್ಯಗಳನ್ನು ಪದಚ್ಯುತಿಗೊಳಿಸುವಷ್ಟು ಬಲಿಷ್ಠರಾಗಿದ್ದರೂ ಆಸ್ಟ್ರಿಯನ್ನರ ವಿರುದ್ಧ ಅಷ್ಟು ಪರಿಣಾಮಕಾರಿಯಾಗಿರಲಿಲ್ಲ. ಪೀಡ್ ಮಾಂಟಿನ ಸೇನೆ ಮುಖ್ಯಪಾತ್ರ ವಹಿಸಿತ್ತು. ಫ್ರೆಂಚರು ಹೆಚ್ಚು ಹೋರಾಡಿದ್ದರು. ಆದರೆ ಬ್ರಿಟನ್ನಿನ ಅಪ್ರತ್ಯಕ್ಷ ನೆರವೂ ಮುಖ್ಯವಾಗಿತ್ತು. 

ಮ್ಯಾಟ್ಜಿನಿಯ ಭೋಧನೆಗಳನ್ನು ಅರ್ಥ ಮಾಡಿಕೊಂಡಿದ್ದವರ ಸಂಖ್ಯೆ ಬಹು ಕಡಿಮೆ. ಆದರೆ ಆತನ ಬಗ್ಗೆ ಅಭಿಮಾನ ಹೊಂದಿದ್ದವರನೇಕ. ಏಕೀಕರಣಕ್ಕಾಗಿ ಇಟಲಿಯ ಜನ ಮತ ನೀಡಿದ್ದರು. ಆದರೆ ಹೊಸತರಲ್ಲಿ ಪ್ರೋತ್ಸಾಹಿಸಿ ಅನಂತರ ತಿರಸ್ಕಾರಭಾವದಿಂದ ನೋಡುವುದು ಇಟಲಿಯ ಪರಂಪರೆಯ ವಿಶೇಷ. ಇಟಲಿಯನ್ನು ಅರಿತಿದ್ದ, ಪ್ರೀತಿಸುತ್ತಿದ್ದ ಕ್ಯಾವರ್ ಕೇವಲ ಇಟಲಿಯ ಸ್ವಾತಂತ್ರ್ಯವನ್ನು ಅಪೇಕ್ಷಿಸಿ ಹೋರಾಡಿದವನೇ ವಿನಾ ಪರ್ಯಯದ್ವೀಪದ ಉತ್ತರ ದಕ್ಷಿಣಗಳನ್ನು ಒಟ್ಟುಗೂಡಿಸಲು ಪ್ರಯತ್ನಿಸಲಿಲ್ಲ. ಗಾರಿಬಾಲ್ಡಿ ಕಾರ್ಯತಃ 1860ರಲ್ಲಿ ಉತ್ತರ ದಕ್ಷಿಣ ಇಟಲಿಗಳ ಏಕೀಕರಣಕ್ಕಾಗಿ ಯತ್ನಿಸಿದ. ಕಡುಬಡತನ ಹಾಗೂ ದರೋಡೆಕಾರ ಪರಂಪರೆಯ ಜೊತೆಗೆ ದಾಸ್ಯದಿಂದ ಹೊರಹೊಮ್ಮುತ್ತಿದ್ದ ದಕ್ಷಿಣ ಇಟಲಿ, ಬಹು ಶೀಘ್ರವಾಗಿ ಕೈಗಾರಿಕೆಗಳಿಂದ ಮುಂದುವರಿಯುತ್ತಿದ್ದ ಪ್ರಗತಿಪೂರ್ಣ ಉತ್ತರ ಇಟಲಿಯಿಂದ ಭಿನ್ನವಾಗಿದೆ ಎಂಬುದನ್ನು ಕ್ಯಾವರ್ ಅರಿತಿದ್ದ. 1860ರ ಅನಂತರ ದಕ್ಷಿಣ ಇಟಲಿಯನ್ನು ಅಭಿವೃದ್ಧಿಗೊಳಿಸಲು ಸರ್ಕಾರ ಹಣ ವ್ಯಯಿಸುತ್ತಿದ್ದುದನ್ನು ಉತ್ತರ ಇಟಲಿ ವಿರೋಧಿಸಿತು. ದಕ್ಷಿಣದವರು ನೌಕರಶಾಹಿ ವ್ಯವಸ್ಥೆಯನ್ನು ವಿರೋಧಿಸಿದರು. 

ಇಟಲಿಯ ಹೊಸ ಸರ್ಕಾರ ಆರ್ಥಿಕಾಭಿವೃದ್ಧಿಯ ಪ್ರಯತ್ನಗಳನ್ನು ನಡೆಸಿತು. ಐಸ್ಕನ್ ದೇಶಭಕ್ತ ರಿಕಾಸೊಲಿ, ಕ್ಯಾವರ್‍ನ ಶಿಷ್ಯ ಮಿಂಗೆಟ್ಟಿ ಹಾಗೂ ರೋಮನ್ನು ವಶಪಡಿಸಿಕೊಳ್ಳುವುದರಲ್ಲಿ ವಿಜಯಿಯಾದ ಲಾಂಜಾ ಇವರೆಲ್ಲರೂ ನೀತಿವಂತರಾಗಿದ್ದರು. ಈ ಕಾಲದಲ್ಲಿ ಇಟಲಿಯ ಸಂಸತ್ತು ಭ್ರಷ್ಟಾಚಾರಕ್ಕೆ ಹೆಸರಾಗಿತ್ತು. ಮುಸ್ಸೋಲಿನಿ ಹೊಸರೀತಿಯ ರಾಜ್ಯ ಸ್ಥಾಪಿಸುವವರೆಗೆ ಈ ಸ್ಥಿತಿ ಮುಂದುವರಿಯಿತು. 

ವಿದೇಶ ಹಾಗೂ ವಸಾಹತು ನೀತಿ : ಇಟಲಿಯ ಏಕೀಕರಣವನ್ನೂ ಸ್ವಾತಂತ್ರ್ಯವನ್ನೂ ಬಯಸಿದ್ದ ಫ್ರಾನ್ಸು ಇಟಲಿಯತ್ತ ಯಾವಾಗಲೂ ಸಂಶಯ ಹಾಗೂ ವೈರಭಾವ ತಳೆದಿತ್ತು. 1878ರ ಬರ್ಲಿನ್ ಕಾಂಗ್ರೆಸ್‍ನಲ್ಲಿ ಇಟಲಿಗೆ ಯಾವ ಮಿತ್ರರಾಷ್ಟ್ರವೂ ಇರಲಿಲ್ಲ. ಈ ಸಮ್ಮೇಳನದ ತೀರ್ಮಾನದನ್ವಯ 1881ರಲ್ಲಿ ಫ್ರಾನ್ಸ್ ಟ್ಯೂನಿಸ್‍ನ ರಕ್ಷಣೆಗೆ ಬಂತು. ಈ ತಿರಸ್ಕಾರದಿಂದ ಇಟಲಿ ಸರ್ಕಾರ ಬಿಸ್ಮಾರ್ಕನ ಬಂಧನಕ್ಕೊಳಗಾಯಿತಲ್ಲದೆ 1882ರಲ್ಲಿ ಆಸ್ಟ್ರಿಯ, ಜರ್ಮನಿ ಮತ್ತು ಇಟಲಿಗಳು ಪರಸ್ಪರ ಸ್ನೇಹದ ಒಪ್ಪಂದ ಮಾಡಿಕೊಂಡುವು. ಇಟಲಿಗೆ ಈ ಮಿತ್ರತ್ವ ಅಷ್ಟು ಸುಲಭವೂ ಆಗಿರಲಿಲ್ಲ, ಪ್ರಯತ್ನವೂ ಆಗಿರಲಿಲ್ಲ. 1914ರ ವರೆಗೆ ಅದು ಕೇವಲ ಕಾಗದದ ಮೇಲಿದ್ದಿತೇ ವಿನಾ ಪರಿಣಾಮಕಾರಿಯಾಗಿರಲಿಲ್ಲ. ಐತಿಹಾಸಿಕವಾಗಿ, ಧಾರ್ಮಿಕವಾಗಿ, ಸಾಂಸ್ಕøತಿಕವಾಗಿ ಹಾಗೂ ವಾಣಿಜ್ಯ ದೃಷ್ಟಿಯಿಂದ ಇಟಲಿ ಮಧ್ಯರಾಷ್ಟ್ರಗಳಿಗಿಂತ ಫ್ರಾನ್ಸಿನೊಡನೆ ಹೆಚ್ಚು ಸಂಬಂಧ ಹೊಂದಿತ್ತು. 1887ರಲ್ಲಿ ಫ್ರಾನ್ಸಿಸ್ಕೊ ಕ್ರಿಸ್ಟಿ ಕೌನ್ಸಿಲ್‍ನ ಅಧ್ಯಕ್ಷನಾದ. ಇವನು ಇಟಲಿಗೆ ವಸಾಹತು ವಿಸ್ತರಣ ತತ್ತ್ವವನ್ನು ನೀಡಿದ. ಕ್ರಿಸ್ಟಿಯೂ ಸಿಸಿಲಿಯವನಾಗಿದ್ದ, ಮ್ಯಾಟ್ಜಿನಿಯ ಶಿಷ್ಯನಾಗಿದ್ದ, ಗಾರಿಬಾಲ್ಡಿಯ ಆಪ್ತನಾಗಿದ್ದ. ಇವನು ಬಲಪಕ್ಷಕ್ಕೆ ಬಂದ. ಅಂದರೆ ರಾಜವ್ಯವಸ್ಥೆಯನ್ನು ಒಪ್ಪಿಕೊಂಡಿದ್ದನೆಂದಾಯಿತು. 

ಆಫ್ರಿಕದ ಉತ್ತರ ತೀರದಲ್ಲಿ ನೆಲೆಸಿದ್ದ ಐರೋಪ್ಯ ವ್ಯಾಪಾರಗಾರರ ಪೈಕಿ ಇಟಲಿಯವರೇ ಹೆಚ್ಚು. ಇವರಿಗೆ ಕೆಂಪುಸಮುದ್ರದ ಮೇಲೆ ಮಸ್ಸಾವದಲ್ಲಿ 1882ರಲ್ಲಿ ಹತೋಟಿ ದೊರಕಿತು. ಕ್ರಿಸ್ಟಿಯಿಂದ 1890ರಲ್ಲಿ ಎರಿಟ್ರಿಯ ವಸಾಹತು ಸ್ಥಾಪನೆಯಾಯಿತು. ಇವನು ಬ್ರಿಟಿಷ್ ಸಮ್ಮತಿ ಪಡೆದ ಇಲ್ಲಿಂದ ಸೋಮಾಲಿ ಲ್ಯಾಂಡ್ ತೀರದ ವರೆಗೆ ಮುನ್ನುಗ್ಗಿದ. ಕ್ರಿಸ್ಟಿ ದೊಡ್ಡ ಸಾಮ್ರಾಜ್ಯ ಸ್ಥಾಪಿಸುವ ಆಕಾಂಕ್ಷೆಯುಳ್ಳವನಾದ. ಅಬಿಸೀನಿಯದಲ್ಲಿ ಸಾಮ್ರಾಟನ ಬಗ್ಗೆ ಜನರಲ್ಲಿದ್ದ ಅಸಮಾಧಾನದ ಉಪಯೋಗ ಪಡೆದುಕೊಂಡು 1895ರಲ್ಲಿ ಟೈಗರ್ ಪ್ರಾಂತ್ಯವನ್ನು ಎರಿಟ್ರಿಯ ವಸಾಹತಿಗೆ ಸೇರಿಸಿರುವುದಾಗಿ ಕ್ರಿಸ್ಟಿ ಘೋಷಿಸಿದ. ಆದರೆ 1895ರ ಡಿಸೆಂಬರಿನಲ್ಲಿ ದೊಡ್ಡ ಸೇನೆಯೊಡನೆ ಅಬಿಸೀನಿಯದ ದೊರೆ ಮೆನೆಲಿಕ್ ಅಂಬಾ ಅಲಗಿನಲ್ಲಿ ಮುಂಬರುತ್ತಿದ್ದ ಸೈನ್ಯವನ್ನೂ ಸೋಲಿಸಿದ. 1896ರ ಮಾರ್ಚಿಯಲ್ಲಿ ಟೈಗರಿನಲ್ಲಿನ ಅಡೊವದಲ್ಲಿ ಇಟಲಿಯ ಮುಖ್ಯ ಸೈನ್ಯವನ್ನು ನಾಶಮಾಡಿದ. 
ಅಡೂವ ಪರಾಭವ ಇಟಲಿಗೆ ಬಹು ದೊಡ್ಡ ಅಘಾತವನ್ನುಂಟುಮಾಡಿತು. ಸಂಪೂರ್ಣ ತಪ್ಪು ಕ್ರಿಸ್ಟಿಯದಾಗಿತ್ತು. ಸ್ವಲ್ಪ ಕಾಲಾನಂತರ ಕ್ರಿಸ್ಟಿ ಅವಮಾನದಿಂದ ಮೃತನಾದ. ಉತ್ತರ ಆಫ್ರಿಕದಲ್ಲಿ ಅವನ ತತ್ತ್ವ ತಿರುವು ಮುರುವಾಗಿ, ಎರಿಟ್ರಿಯ ಮತ್ತು ಸೋಮಾಲಿ ಲ್ಯಾಂಡ್‍ಗಳು ಮಾತ್ರ ಉಳಿದುಕೊಂಡುವು. ಹಾಗೂ ಸಾಮ್ರಾಜ್ಯ ಕ್ಷೀಣಿಸಿತು. ಸ್ವಲ್ಪ ಕಾಲದ ಅನಂತರ ರಾಜಕೀಯ ಹತೋಟಿ ಗಿಯೊಲಿಟಿಯ ವಶಕ್ಕೊಳಗಾಯಿತು.

ಕೈಗಾರಿಕಾವಾದ ಮತ್ತು ಸಾಮ್ರಾಜ್ಯವಾದ : ದಕ್ಷಿಣದ ಕೆಲವು ಭಾಗಗಳ ಹೊರತು, ಮಿಕ್ಕ ಭಾಗಗಳಲ್ಲಿನ ದೇಶದ ಆರ್ಥಿಕ ಅಭ್ಯುದಯ ಭರದಿಂದ ಸಾಗುತ್ತಿತ್ತು. 1880ರ ವೇಳೆಗೆ ಇಡೀ ಪರ್ಯಾಯದ್ವೀಪದಲ್ಲಿ ಸಂಪರ್ಕಸಾಧನವಾದ ರಾಷ್ಟ್ರೀಯ ರೈಲ್ವೆ ವ್ಯವಸ್ಥೆ ಏರ್ಪಟ್ಟಿತ್ತು. ಕಲ್ಲಿದ್ದಲಿನ ಹಾಗೂ ಕಬ್ಬಿಣದ ಅಭಾವದಿಂದ ಉತ್ತರದ ಭಾರಿ ಪ್ರಮಾಣದ ಕೈಗಾರಿಕೆಗಳು ಜರ್ಮನಿ ಮತ್ತು ಇಂಗ್ಲೆಂಡ್‍ಗಳಿಂದ ಆಮದು ಮಾಡಿಕೊಂಡ ಕಚ್ಚಾಪದಾರ್ಥಗಳ ಸಹಾಯದಿಂದ ಅಭಿವೃದ್ಧಿ ಹೊಂದುತ್ತಿದ್ದುವು. 1828ರ ವೇಳೆಗೆ ಪರ್ವತಗಳಿಂದ ಹರಿದುಬರುತ್ತಿದ್ದ ಜಲಶಕ್ತಿಯಿಂದ ಜಲವಿದ್ಯುತ್ತಿನ ಉತ್ಪಾದನೆ ಆರಂಭವಾಯಿತು. ಇದು ಮುಂದೆ ದೇಶದ ಪ್ರಗತಿಗೆ ಮುಖ್ಯವಾಗಿತ್ತು. ಇಟಲಿಯ ಜನಸಂಖ್ಯೆ 1860 ರಿಂದ 1911ರ ವೇಳೆಗೆ 25% ರಷ್ಟು ಹೆಚ್ಚಿತು. ಇಟಲಿಯ ಪ್ರಮುಖ ಕಾರ್ಯಗಳಲ್ಲಿ ಒಂದಾದ ವ್ಯವಸಾಯ ಕ್ಷೇತ್ರದಲ್ಲಿ ವೈಜ್ಞಾನಿಕ ಅಭಿವೃದ್ಧಿ ಉಂಟಾಗಿ, ಹೆಚ್ಚುತ್ತಿದ್ದ ಜನಸಂಖ್ಯೆಗೆ ಆಹಾರ ಪೂರೈಸುವುದರಲ್ಲಿ ಸಹಾಯ ಮಾಡಿತು. ಆದರೆ ಜನಸಂಖ್ಯೆಯ ಹೆಚ್ಚಳ ಆಹಾರದ ಉತ್ಪಾದನೆಯನ್ನೂ ಮೀರಿಸಿತ್ತು. ರೈತರ ಅತಿಶ್ರಮದ ದುಡಿಮೆಯಿದ್ದರೂ ದೇಶದ ಅನೇಕ ಭಾಗಗಳಲ್ಲಿ ನೆಲ ಫಲವತ್ತಾಗಿಲ್ಲದ್ದರಿಂದ ಜಮೀನಿನಿಂದ ದೊರೆಯುತ್ತಿದ್ದ ಉತ್ಪನ್ನ ಹೆಚ್ಚಾಗುವುದು ಸಾಧ್ಯವಿರಲಿಲ್ಲ. ದಕ್ಷಿಣದಲ್ಲಿನ ರೈತರು, ಅದರಲ್ಲೂ ವಿಶೇಷವಾಗಿ ಸಿಸಿಲಿಯ ರೈತರು, ಕಡುಬಡವರಾಗಿದ್ದರು, ಅವರಲ್ಲಿ ವ್ಯಾಪಕವಾಗಿ ಹರಡಿದ್ದ ರೋಗರುಜಿನಗಳ ಪರಿಹಾರಕ್ಕೆ ಯಾವುದೇ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಉತ್ತರದವರ ಬೇಡಿಕೆಗಳನ್ನು ಪಾರ್ಲಿಮೆಂಟ್ ಬಹುಬೇಗ ಗಮನಿಸುತ್ತಿತ್ತು. ಏಕೆಂದರೆ, ಟ್ಯುರಿನ್ ಮತ್ತು ಮಿಲಾನ್‍ಗಳಲ್ಲಿ ಅಭ್ಯುದಯಗೊಳ್ಳುತ್ತಿದ್ದ ಕೈಗಾರಿಕೆಗಳಿಗೆ ಯಾವರೀತಿ ರೋಮ್‍ನಿಂದ ಸಹಾಯ ಪಡೆಯಬೇಕೆಂಬುದನ್ನು ಅಲ್ಲಿನ ಪ್ರಭಾವಿತ ಸದಸ್ಯರು ಅರಿತಿದ್ದರು. ಬೆಲೆಗಳು ಏರಿದುವು ಹಾಗೂ ರೈತರ ಪರಿಸ್ಥಿತಿ ಏಕೀಕರಣಕ್ಕೆ ಮುಂಚೆ ಇದ್ದ ಪರಿಸ್ಥಿತಿಗಿಂತಲೂ ಹದಗೆಟ್ಟಿತು. 1893-94ರಲ್ಲಿ ಸಿಸಿಲಿಯಲ್ಲಿ ಭೂಕಾರ್ಮಿಕರು ತಮ್ಮ ತಮ್ಮಲ್ಲೇ ಸಂಘಟನೆಯ ವ್ಯವಸ್ಥೆ ಮಾಡಿಕೊಂಡು ದಂಗೆಯೆದ್ದರು. ಕ್ರಿಸ್ಟಿ ಅತಿಕ್ರೌರ್ಯದಿಂದ ದಂಗೆಯನ್ನಡಗಿಸಿದ. ಆದರೆ ಈ ಬಾರಿ ಜನ ವಲಸೆ ಹೋಗಲಾರಂಭಿಸಿದ್ದು ದಕ್ಷಿಣದಿಂದ; ಉತ್ತರದಿಂದಲ್ಲ. ಈ ಸುರಕ್ಷಾಮಾರ್ಗಕ್ಕಾಗಿ ಸರ್ಕಾರ ಕೃತಜ್ಞವಾಗಿತ್ತು. ವರ್ಷೇ ವರ್ಷೇ ಲಕ್ಷಾಂತರ ಜನ ಇಟಾಲಿಯನ್ನರು ಅಮೆರಿಕ ಅಥವಾ ಟ್ಯುನಿಸ್‍ನಂಥ ದೇಶಗಳಲ್ಲಿ ಕೆಲಸಮಾಡಲು ವಲಸೆ ಹೋದಾಗ ಉಂಟಾದನಷ್ಟ ರಾಷ್ಟ್ರೀಯತಾವಾದಿಗಳಿಗೆ ಅರ್ಥವಾಯಿತು. ಇಟಲಿಯ ರಾಷ್ಟ್ರಧ್ವಜದಡಿಯಲ್ಲಿ ನೆಲೆಸುತ್ತಿದ್ದ ಇಟಲಿಯ ವಸಾಹತುಗಳಿಗೆ ಬೇಡಿಕೆ ಹೆಚ್ಚಾಯಿತು. 

ಕೈಗಾರಿಕೆಯೂ ವ್ಯವಸಾಯ ಕ್ಷೇತ್ರದಲ್ಲಿ ವೈಜ್ಞಾನಿಕ ವಿಧಾನಗಳ ಬಳಕೆಯೂ ಉತ್ತರ ಇಟಲಿಯ ಆರ್ಥಿಕ ವಿಸ್ತರಣೆಗೆ ಕಾರಣವಾದುವು. ಪಶ್ಚಿಮ ಯೂರೋಪು ಹಾಗೂ ಇತರ ಪ್ರದೇಶಗಳಲ್ಲಿನಂತೆಯೇ ಇಟಲಿಯಲ್ಲೂ ವರ್ಗಚೇತನವುಂಟಾಯಿತು. ಕಾರ್ಮಿಕವರ್ಗಗಳಲ್ಲಿ ಸಾಮಾಜಿಕ ಚಳವಳಿ ಉದ್ಭವಿಸಿತು. ಸಮಾಜವಾದ ಇಟಲಿಗೆ 1860ರಲ್ಲಿ ಬಂತು. ದಕ್ಷಿಣ ಹಾಗೂ ಉತ್ತರ ಇಟಲಿಗಳೆರಡರಲ್ಲೂ ತೀವ್ರವಾಗಿ ಮಾಕ್ರ್ಸ್‍ವಾದ ಪ್ರಗತಿಹೊಂದಿತು. ಉತ್ತರ ಇಟಲಿಯ ನಗರಗಳು ಮತ್ತು ಬೊಲೊನಿನ ಸುತ್ತಲಿನ ಪ್ರದೇಶಗಳಲ್ಲಿ ವಿಶೇಷವಾಗಿ ಸಾಮಾಜಿಕ ಗುಂಪುಗಳಿಗೆ 1871ರ ಪ್ಯಾರಿಸ್ ಕಮ್ಯೂನ್ ಸ್ಫೂರ್ತಿದಾಯಕವಾಯಿತು. ಯಾವುದೇ ಕ್ರಾಂತಿ ಐಹಿಕಧ್ಯೇಯಸಾಧನೆಗಾಗಿ ಮಾತ್ರವೇ ಆಗಬಾರದು; ಹಾಗೂ ಇಟಲಿಯ ಅಭ್ಯುದಯಕ್ಕೆ ಎಲ್ಲ ವರ್ಗಗಳೂ ನಿರಂತರವಾಗಿ ದುಡಿಯಬೇಕು-ಎಂಬ ಮ್ಯಾಟ್ಜಿನಿಯ ಬೋಧನೆಯನ್ನು ನಿಷೇಧಿಸಲಾಯಿತು. 

1890ರ ಇಟಲಿಯ ಸಮಾಜವಾದಿ ಪಕ್ಷ ಸ್ಥಾಪನೆಗೊಂಡಿತು. ಕೆಲವು ಗುಂಪುಗಳು ತೀವ್ರಗಾಮಿಗಳಂತೆ ವರ್ತಿಸುತ್ತಿದ್ದರೂ ರಾಷ್ಟ್ರಪಕ್ಷ ಮಾತ್ರ ಮಿತವಾದಿಗಳ ಪರವಾಗಿತ್ತು. ಅನಂತರದ ವರ್ಷಗಳಲ್ಲಿ ಅದು ವಾಮಪಕ್ಷಗಳಿಗೆ ಬೆಂಬಲ ನೀಡಿತು. ಇದರ ಮುಖ್ಯ ನಾಯಕರಾದ ಬೆಸ್ಸೊಲಿಟ ಮತ್ತು ಟುರಾಟ ಕ್ರಮೇಣ ಗಿಯೊಲಿಟಿಯೊಡನೆ ಮಿತ್ರತ್ವ ಬೆಳೆಸಿದರು. ಕಾರ್ಮಿಕ ಹಿತರಕ್ಷಣಾ ಕಾಯಿದೆಗಳು ಜಾರಿಗೆ ಬಂದುವು. ಆದರೆ ಕೆಲವು ಪಾರ್ಲಿಮೆಂಟ್ ಸದಸ್ಯರು ಮತದಾನ ಪದ್ಧತಿಯ ಬಗ್ಗೆ ಪಾರ್ಲಿಮೆಂಟಿನಲ್ಲಿ ಒತ್ತಾಯ ಮಾಡದಾದರು. 1882ರಲ್ಲಿ ಮತ ನೀಡಿಕೆಯ ನಿಯಮವನ್ನು ವಿಸ್ತರಿಸಿದ್ದಾಗ್ಯೂ ಜನಸಂಖ್ಯೆಯ ಕೇವಲ 6%ರಷ್ಟು ಜನ ಮಾತ್ರ ಮತ ನೀಡಬಹುದಾಗಿತ್ತು. ಈ ಅವಶ್ಯಕ ಬೇಡಿಕೆಗೆ 1913ರವರೆಗೆ ಪುರಸ್ಕಾರ ದೊರಕಲಿಲ್ಲ. ಸಿಂಡಿಕಲಿಸ್ಟರ ನೇರ ಕಾರ್ಯಕ್ರಮಗಳೂ ಮುಷ್ಕರಗಳೂ ಹೆಚ್ಚಿದವು. ಪಾರ್ಲಿಮೆಂಟರಿ ವಿಧಾನವನ್ನು ಕಿತ್ತೊಗೆಯಲು ಬೋಧನೆ ನಡೆಯಿತು. ಗಾರಿಬಾಲ್ಡಿ ಹಾಗೂ ಅವನ ಕೆಂಪು ಅಂಗಿಯವರ ಗುಪ್ತ ಸಮಾಜಗಳ ಅನಾಯಕತೆಯ ಪರಂಪರೆ ಪುನಃ ಜನಿಸಿತು. ಇದರ ಪರಿಣಾಮವಾಗಿ ಫ್ಯಾಸಿಸಂ ವಿಜಯ ಗಳಿಸಿತು. ಮುಸ್ಸೋಲಿನಿ ಸಮಾಜವಾದಿಗಳ ಸಿಂಡಿಕಲಿಸ್ಟ್ ಗುಂಪಿಗೆ ಸೇರಿದವನಾಗಿದ್ದು ಸೊರೆಲ್‍ನ ಶಿಷ್ಯನಾಗಿದ್ದ. 1912ರ ವೇಳೆಗೆ ಅವಂತಿ ಪತ್ರಿಕೆಯ ಸಂಪಾದಕನಾಗಿ, ಪಾರ್ಲಿಮೆಂಟರಿ ರಾಜ್ಯವನ್ನು ಬಹಿರಂಗವಾಗಿ ಖಂಡಿಸುತ್ತಿದ್ದ; ಟ್ಯುರಾಟಿ ಹಾಗೂ ಅವನ ಪಾರ್ಲಿಮೆಂಟರಿ ಪಕ್ಷವನ್ನು ವಿರೋಧಿಸಿದ್ದ. 

ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಇಟಲಿಯಲ್ಲಿ ಮುಖ್ಯವಾಗಿದ್ದ ಮತ್ತೊಂದು ಚಳವಳಿಯೆಂದರೆ ರಾಷ್ಟ್ರೀಯತಾವಾದಿಗಳದು. ಇವರು ಸಹ ಸಿಂಡಿಕಲಿಸ್ಟ್‍ಗಳಂತೆ ತೀವ್ರಗಾಮಿ ದೃಷ್ಟಿ ಹೊಂದಿದ್ದರು. ಸಿಂಡಿಕಲಿಸ್ಟ್ ಮತ್ತು ಪಾರ್ಲಿಮೆಂಟರಿ ಸಮಾಜವಾದಿಗಳ ಪಂಗಡದಿಂದ ಬೇರಾದ ರಾಷ್ಟ್ರೀಕತಾವಾದಿಗಳ ಸಂಘ 1908ರಲ್ಲೇ ಸ್ಥಾಪಿತವಾಯಿತು. ರಾಷ್ಟ್ರೀಯತಾವಾದಿಗಳ ಸಿದ್ಧಾಂತಗಳು ಮುಖ್ಯವಾಗಿರಲಿಲ್ಲ ಅಥವಾ ಸ್ವಂತದ್ದೂ ಆಗಿರಲಿಲ್ಲ. 1914ರ ಯುದ್ಧದ ವರೆಗೆ ಯೂರೋಪಿನಲ್ಲಿ ಪ್ರಚಲಿತವಾಗಿದ್ದ ಉದ್ದತೆ ರಾಷ್ಟ್ರವಾದದ ಸಿದ್ಧಾಂತಗಳಂತೆಯೇ ಇದ್ದುವು. ಆದರೆ ರಾಷ್ಟ್ರೀಯತಾವಾದಿಗಳು ಸಿಂಡಿಕಲಿಸ್ಟರು ಮತ್ತು ಮುಸ್ಸೋಲಿನಿಯ ತತ್ತ್ವಗಳ ನಡುವೆ ಪರಸ್ಪರ ಸಹಾನುಭೂತಿಯ ಬಂಧನವೊಂದಿದ್ದಿತು ಎಂಬುದನ್ನರಿಯುವುದು ಅತಿಮುಖ್ಯ. ಮೊದಲಿನ ಎರಡೂ ಅನಂತರದ ಫ್ಯಾಸಿಸ್ಟ್ ಚಳವಳಿಯಲ್ಲಿ ಒಂದಾದುವು. ಬಡತನ, ಶಕ್ತಿಯುತ ರಾಷ್ಟ್ರಗಳ ಮೇಲೆ ಅನಿವಾರ್ಯ ಅವಲಂಬನ, ಶಕ್ತಿಯುತ ಹಾಗೂ ಸಂಪದ್ಯುಕ್ತ ರಾಷ್ಟ್ರಗಳಿಂದ ಶೋಷಣೆ-ಇವುಗಳಿಗೆ ಒಳಗಾಗಿದ್ದ ಇಟಲಿಯೂ ಶ್ರಮಜೀವಿ ರಾಷ್ಟ್ರವಾಗಿತ್ತು. 

ಗಿಯೊಲಿಟಿ 1911ರಲ್ಲಿ, ಟ್ರಿಪೊಲಿ ಹಾಗೂ ಸಿರೆನೈಕಗಳನ್ನು ವಶಮಾಡಿಕೊಳ್ಳಲು ತುರ್ಕಿಯ ವಿರುದ್ಧವಾಗಿ ಯುದ್ದಕ್ಕೆ ಹೋದ. ಈ ಎರಡರ ಜೊತೆಗೆ ಡೊಡೆಕನೀಸ್ ದ್ವೀಪ ಆಕ್ರಮಿಸಿದ. ಆ ಕಾರ್ಯದಲ್ಲಿ ಆತನಿಗೆ ಸರ್ಕಾರದ ಬೆಂಬಲವಿತ್ತು. ಮುಸ್ಸೋಲಿನಿಯೂ ಸೇರಿ ಅನೇಕ ಸಮಾಜವಾದಿಗಳು ಈ ಯುದ್ಧವನ್ನು ಸಾಮ್ರಾಜ್ಯಶಾಹಿಯೆಂದು ತಿರಸ್ಕರಿಸಿದರೂ ಫ್ರಾನ್ಸ್ ಹಾಗೂ ಬ್ರಿಟನ್‍ಗಳೊಡನೆ ಉತ್ತರ ಆಫ್ರಿಕದಲ್ಲಿ ತನ್ನ ಶಕ್ತಿ ಸ್ಥಾಪಿಸಲು ಸಾಧ್ಯವಾಗಿದ್ದುದರಿಂದ ಹಾಗೂ ತಮ್ಮ ತಾಯ್ನಾಡಿನ ತೀರಕ್ಕೆ ಎದುರಾಗಿದ್ದ ಕರಾವಳಿ ಪ್ರದೇಶ ವಿದೇಶೀಯರಿಗೆ ಹೋಗದಂತೆ ತಡೆಗಟ್ಟಿದ್ದರಿಂದ ಜನರಲ್ಲಿ ಸಾಮಾನ್ಯವಾಗಿ ತೃಪ್ತಿಯಿತ್ತು. ಈ ಯುದ್ಧದಲ್ಲಿ ಇಟಲಿಯ ಸೈನಿಕರ ಸಾಧನೆಯೇನೂ ಗಮನಾರ್ಹವಾದದ್ದಲ್ಲ. ಏಕೆಂದರೆ ತುರ್ಕಿಯವರು ತಾಯ್ನಾಡಿನ ಸಮೀಪದಲ್ಲಿದ್ದ ಬಾಲ್ಕನ್ ರಾಜ್ಯಗಳವರೊಡನೆ ಯುದ್ಧಮಾಡುವುದರಲ್ಲಿ ನಿರತರಾಗಿದ್ದರು. ಆದಾಗ್ಯೂ ಕೊನೆಗೆ ಇಟಲಿಯವರು ವಿಜಯಶಾಲಿಗಳಾದರು. 
ಈ ವಿಜಯ ಬಹಳ ಅಲ್ಪ ಆರ್ಥಿಕ ಫಲ ನೀಡಿತು. ಅದು ರಾಷ್ಟ್ರೀಯತಾವಾದಿಗಳ ದಾಹವನ್ನಡಗಿಸಲಿಲ್ಲ. ರಾಷ್ಟ್ರೀಯತಾವಾದಿಗಳು ನಿಜವಾಗಿ ಆಸಕ್ತಿಹೊಂದಿದ್ದದ್ದು ಇಟಾಲಿಯಾ ಇರ್ರೆಡೆಂಟದಲ್ಲಿ, ಇದು ಮಾತೃಭೂಮಿಯ ಭಾಗವಾಗಿ ಇನ್ನೂ ವಿದೇಶಿಯರ ಆಳ್ವಿಕೆಯಲ್ಲೇ ಇತ್ತು. ಇಟಲಿಯ ಜನರೇ ಹೆಚ್ಚಾಗಿದ್ದ ಟ್ರೆಂಟಿನೋ ಕಣಿವೆ, ಟ್ರಿಯಸ್ಟೆ ನಗರ ಹಾಗೂ ಫ್ರಿಯುಲಿ, ಇಷ್ಟ್ರಿಯ ಹಾಗೂ ಡಾಲ್ಲೇಷಿಯನ್ ನಗರಗಳ ಕೆಲವು ಭಾಗಗಳನ್ನು ವಶಪಡಿಸಿಕೊಳ್ಳಬೇಕೆಂಬುದು ಅವರ ಬಯಕೆಯಾಗಿತ್ತು. ಈ ಎಲ್ಲ ಪ್ರಾಂತ್ಯಗಳೂ ಆಸ್ಟ್ರಿಯನ್ನರ ಆಳ್ವಿಕೆಯಲ್ಲೇ ಇದ್ದು, ಅಲ್ಲಿನ ಸರ್ಕಾರ ಇಟಲಿಯ ಜನರ ಮೇಲೆ ಅದರಲ್ಲೂ ವಿಶೇಷವಾಗಿ ಟ್ರಿಯಸ್ಟೆಯ ಜನರ ಮೇಲೆ, ಪಕ್ಷಪಾತ ತೋರಿಸುತ್ತಿತ್ತು. 1908ರಲ್ಲಿ ಇಟಲಿಯ ಒಪ್ಪಿಗೆಯಿಲ್ಲದೆ ಆಸ್ಟ್ರಿಯ, ಬಾಸ್ನಿಯ ಹಾಗೂ ಹರ್ಸೆಗೋವಿನಗಳನ್ನು ವಶಮಾಡಿಕೊಂಡಿತ್ತು. ಯೂರೋಪಿನಲ್ಲಿ ಈ ವೇಳೆಗಾಗಲೇ ಎರಡು ಪಂಗಡಗಳಾಗಿದ್ದು, ಇಟಲಿ ಅನೇಕ ತೊಂದರೆಗಳಿದ್ದಾಗ್ಯೂ ತನ್ನ ಬದ್ಧದ್ವೇಷಿಯಾದ ವಿಯನ್ನದ ಕಡೆ ತಿರುಗದೆ ಬರ್ಲಿನಿನ ಬೆಂಬಲದಿಂದ ಫ್ರಾನ್ಸಿನತ್ತ ತಿರುಗಿತು. ಗಿಯೊಲಿಟಿ 1912ರಲ್ಲಿ ಜರ್ಮನಿ ಹಾಗೂ ಆಸ್ಟ್ರಿನಗಳೊಡನೆ ತ್ರಿವಳಿ ಮಿತ್ರತ್ವವನ್ನು ಸಾಕಷ್ಟು ವಿರೋಧಗಳ ನಡುವೆ ಬೆಳೆಸಿದ, ಗಿಯೊಲಿಟಿ ಕೆಲವು ಕಾಲ ಜರ್ಮನಿಯವರತ್ತ ಮತ್ತೆ ಕೆಲವು ಕಾಲ ಫ್ರಾನ್ಸ್‍ನವರತ್ತ ತಿರುಗುತ್ತ ಶಾಂತಿ ಕಾಪಾಡಲು ಪ್ರಯತ್ನಿಸಿದ. ಆದರೆ ಜರ್ಮನಿಯವರು ಮೋಸ ಹೋಗಲಿಲ್ಲ. 

ಮೊದಲನೆಯ ಮಹಾಯುದ್ಧ ಹಾಗೂ ಅದರ ಪರಿಣಾಮ : 1914ರ ಆಗಸ್ಟಿನಲ್ಲಿ ಮೊದಲನೆಯ ಮಹಾಯುದ್ಧ ಆರಂಭವಾದಾಗ, ಕೇಂದ್ರೀಯ ಶಕ್ತಿಗಳು ಗೆಲ್ಲುವುವೆಂದೂ ಇಟಲಿ ಸಾಧಿಸಿದ್ದ ಐಕ್ಯವನ್ನು ವಿಜಯೀ ರಾಷ್ಟ್ರವಾದ ಆಸ್ಟ್ರಿಯ ನಾಶಗೊಳಿಸುವುದೆಂದೂ ಇಟಾಲಿಯನ್ನರ ಮನಸ್ಸಿನಲ್ಲಿ ಭಯವಿತ್ತು. ತ್ರಿವಳಿ ಸಂಬಂಧದ ಒಪ್ಪಂದದ ಪ್ರಕಾರ ಜರ್ಮನಿ, ಆಸ್ಟ್ರಿಯನ್ನರ ಮೇಲೆ ದಾಳಿಯಾದರೆ ಮಾತ್ರ ಇಟಲಿ ಅವುಗಳಿಗೆ ನೆರವು ನೀಡಬೇಕಾಗಿತ್ತು. ಇಟಲಿ ಆ ರಾಷ್ಟ್ರಗಳ ಮೇಲೆ ದಾಳಿ ಮಾಡಲಾಗದೆಂದು ಸಾಮಾನ್ಯವಾದ ಸಹಜಾಭಿಪ್ರಾಯವಾಗಿತ್ತು. ಮತ್ತೊಂದು ಕಡೆ, ಟ್ರಿಪೋಲಿ ಯುದ್ಧದ ಬಗ್ಗೆ ಫ್ರಾನ್ಸ್ ಬ್ರಿಟನ್‍ಗಳೆರಡೂ ಆಕ್ಷೇಪಣೆಯ ದೃಷ್ಟಿ ಹೊಂದಿದ್ದುವು. ಇಟಲಿ ಒಂದು ಪಕ್ಷ ಮಿಲಿಟರಿ ಹಾಗೂ ಆರ್ಥಿಕ ನೆರವು ನೀಡುವ ಸಾಮಥ್ರ್ಯಹೊಂದಿದ್ದರೂ ಅದು ಯಾವುದೇ ರೀತಿಯ ನೆರವು ನೀಡುವ ಉತ್ಸಾಹವನ್ನೂ ವ್ಯಕ್ತಪಡಿಸಲಿಲ್ಲ. ಗಿಯೊಲಿಟಿಯ ಅನಂತರದ ಸಾಲಾಂಡ್ರನ ಹೊಸ ಸರ್ಕಾರ ಪವಿತ್ರ ಅಹಂಭಾವದ ತತ್ತ್ವವನ್ನು ಮುಂದುವರಿಸಿತ್ತು ಹಾಗೂ ತನ್ನ ಸೈನಿಕ ಶಕ್ತಿಯನ್ನು ಅಭಿವೃದ್ಧಿಪಡಿಸಿಕೊಳ್ಳುವುದರತ್ತ ಗಮನ ಹರಿಸಿತ್ತು.
ಡಿ. ಅನುಂಜಿನೋ, ಮುಸ್ಸೋಲಿನಿ ಹಾಗೂ ಇತರರ ಚಳವಳಿ ಹಾಗೂ ಪ್ರದರ್ಶನಗಳ ಫಲವಾಗಿ, ಇಟಲಿ 1915ರ ಮೇ 24ರಂದು ಮಿತ್ರರಾಷ್ಟ್ರಗಳ ಪರವಾಗಿ ಯುದ್ದಕ್ಕಿಳಿಯಿತು. ಈ ವೇಳೆಗೆ ಮುಸ್ಸೋಲಿನಿ ಮಿಲಾನಿನಿಂದ ಸಮಾಜವಾದಿಗಳಿಂದ ಬೇರಾಗಿದ್ದ ಇಲ್ ಪೊಪೊಲೊ ಡಿ ಇಟಾಲಿಯ ಎಂಬ ಪತ್ರಿಕೆಯೊಂದನ್ನು ಹೊರಡಿಸುತ್ತಿದ್ದ. ಡಿ. ಅನುಂಜಿನೊ ಜೊತೆಯಲ್ಲಿ ಫ್ಯಾಸಿಡೆ ಅಜಿಯೊನ್ ರೆವಲ್ಯೊಷನೇರಿಯಾ ಚಳವಳಿಯನ್ನು ದೇಶದಲ್ಲೆಲ್ಲಾ ವ್ಯವಸ್ಥೆ ಮಾಡಿದ್ದ. ಕ್ರಾಂತಿಕಾರಿ ಸಮಾಜವಾದಿಗಳೂ ಸಿಂಡಿಕಲಿಸ್ಟರೂ ಯುದ್ಧದ ಪರವಾಗಿದ್ದರೆ, ಗಿಯಾಲಿಟಿ ಹಾಗೂ ಪಾರ್ಲಿಮೆಂಟರಿ ಸಮಾಜವಾದಿಗಳು ಶಾಂತಿಯ ಪರವಾಗಿದ್ದರು. ಯುದ್ಧವನ್ನು ಬಯುಸುತ್ತಿದ್ದ ಪಕ್ಷ ಗೆದ್ದಿತು. ಏಕೆಂದರೆ 1900ರಲ್ಲಿ ಸಿಂಹಾಸನಾರೋಹಣ ಮಾಡಿದ್ದ ದೊರೆ ಮೂರನೆಯ ವಿಕ್ಟರ್ ಇಮಾನ್ಯುಯಲ್ ಹಾಗೂ ಶಾಸನಸಭಾ ಅಧ್ಯಕ್ಷ ಸಲಾಂಡ್ರ, ಇಬ್ಬರೂ ಯುದ್ಧ ಬಯಸಿದ್ದರು. 

ಆಸ್ಟ್ರಿಯದ ವಿಶಾಲ ಪ್ರದೇಶದ ಮೇಲೆ ಇಟಲಿ 1917ರ ವರೆಗೆ ದಾಳಿಯಲ್ಲಿ ನಿರತವಾಗಿದ್ದಿತಾದರೂ ಅದಕ್ಕೆ ಜಯ ದೊರೆಯಲಿಲ್ಲ. ಇಟಲಿಯವರ ಈ ಪ್ರಯತ್ನ ಬಹು ದುಬಾರಿಯದಾಗಿತ್ತು. ಅಲ್ಲದೆ ಅವರ ಬಳಿ ಅರಿಲರಿ ಹಾಗೂ ಷೆಲ್‍ಗಳ ಕೊರತೆಯಿತ್ತು. (ಈ ಕೊರತೆಯನ್ನು ಫ್ರಾನ್ಸ್ ಹಾಗೂ ಬ್ರಿಟನ್ನುಗಳ ನೆರವಿನಿಂದ ಭಾಗಶಃ ನಿವಾರಿಸಲಾಗಿತ್ತು), ಗಾಯಾಳುಗಳ ಸಂಖ್ಯೆ ಏರುತ್ತಲಿತ್ತು. 1917ರ ಬೇಸಗೆಯ ಘಟನೆಗಳ ಅನಂತರ ಸೈನಿಕರ ಧೈರ್ಯಸ್ಥೈರ್ಯಗಳು ಕುಗ್ಗಿದ್ದವು. 1917ರ ಅಕ್ಟೋಬರ್‍ನಲ್ಲಿ, ಏಳು ಜರ್ಮನ್ ಡಿವಿಷನ್‍ಗಳಿಂದ ಕೂಡಿದ್ದ ಆಸ್ಟ್ರಿಯದ ಸೈನ್ಯ ಕ್ಯಾಪೊರೆಟ್ಟೊದ ಸುತ್ತ ಐಸೊಂಜೊವನ್ನು ವಶಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಯಿತು. ಇಟಲಿಯವರನ್ನು ಪಿಯಾವೆ ನದಿಯ ವರೆಗೆ ಹಿಂದಕ್ಕಟ್ಟಲಾಯಿತು. ಈ ಸ್ಥಳದಲ್ಲಿದ್ದಾಗ ಐದು ಬ್ರಿಟಿಷ್ ಹಾಗೂ ಆರು ಫ್ರೆಂಚ್ ಡಿವಿಷನ್‍ಗಳ ಸಮಯೋಚಿತವಾದ ನೆರವು ದೊರೆಯಿತು. ಹೀಗಾಗಿ ಆಸ್ಟ್ರಿಯದವರು ಮುಂದೆ ನುಗ್ಗಲಾರದೆ ಹೋದರು. ಮುಂದೆ ಜನರಲ್ ಡಿಯಾಜ್, ಇಸಾನೊ ಹಾಗೂ ಟ್ರಿಯೆಸ್ಟೆಯವರೆಗೂ ಸೈನ್ಯ ನುಗ್ಗಿಸಿದ. 1918ರ ನವೆಂಬರ್ 4ರಂದು ಆಸ್ಟ್ರಿಯನ್ನರು ಯುದ್ಧವಿಶ್ರಾಂತಿಗೆ ಸಹಿ ಹಾಕಿದರು. 

ಫ್ರಾನ್ಸ್ ಹಾಗೂ ಬ್ರಿಟನ್ನುಗಳಂತೆ ತಾವೂ ಶೌರ್ಯದಿಂದ ಕಾದಿದ್ದುದಾಗಿ ಇಟಾಲಿಯನ್ನರು ಭಾವಿಸಿದ್ದರು, ಆದರೆ ತಮ್ಮನ್ನು ಪ್ಯಾರಿಸ್ ಶಾಂತಿಸಮ್ಮೇಳನದಲ್ಲಿ ಕಡೆಗಣಿಸಿದರೆಂದು ನಿರಾಶೆ ಹೊಂದಿದ್ದರು. ಅವರ ಪ್ರತಿನಿಧಿಗಳಾಗಿದ್ದ ಪ್ರಧಾನಿ ಆರ್ಲ್ಯಾಂಡೊ ಹಾಗೂ ವಿದೇಶಮಂತ್ರಿ ಸೊನ್ನಿನೊ ಬಹು ಪೇಚಿನ ಸ್ಥಿತಿಯಲ್ಲಿ ಸಿಲುಕಿದ್ದರು. ಅವರು ಡಿ ಅನುಂಜಿನೂ ಹಾಗೂ ಮುಸ್ಸೋಲಿನಿಯಂಥ ರಾಷ್ಟ್ರೀಯತಾವಾದಿಗಳನ್ನೂ ಸಿಂಡಿಕಲಿಸ್ಟ್‍ಗಳನ್ನೂ ಮೆಚ್ಚಿಸಬೇಕಾಗಿತ್ತು. ಸಮಾಜವಾದಿಗಳ ನಂಬಿಕೆಯನ್ನೂ ಗಳಿಸಬೇಕಾಗಿತ್ತು. ಅವರು ಜರ್ಮನಿಯ ದಕ್ಷಿಣ ಟಿರೋಲ್ ಸೇರಿದಂತೆ ಟ್ರೆಂಟಿನೋ ಹಾಗೂ ಟ್ರಿಯೆಸ್ಟೆಗಳನ್ನು ಪಡೆದರಾದರೂ ಲಂಡನ್ನಿನ ಕರಾರಿನಲ್ಲಿ ಕೊಡಲೊಪ್ಪಲಾಗಿದ್ದ ಕಡಲತೀರವನ್ನಾಗಲಿ ಜರ್ಮನಿಯ ವಸಾಹತುಗಳನ್ನಾಗಲಿ ತುರ್ಕಿ ಸಾಮ್ರಾಜ್ಯದ ಗಮನಾರ್ಹ ಭಾಗವನ್ನಾಗಲೀ ಪಡೆಯಲಿಲ್ಲ. ಲಂಡನ್ನಿನ ಕರಾರಿನಲ್ಲಿ ವಿವರಿಸಲಾಗದಿದ್ದು ರಾಷ್ಟ್ರೀಯತಾವಾದದ ತತ್ತ್ವಕ್ಕನುಗುಣವಾಗುವ ಇಸ್ಟ್ರಿಯದ ಪೂರ್ವತೀರದ ಫಿಯುಮ್ ಬಂದರಿನ ಬಗ್ಗೆ ಭಾರೀ ಚಳವಳಿ ಇಟಲಿಯಲ್ಲಿ ಅರಂಭವಾಯಿತು. ಏಡ್ರಿಯಾಟಿಕ್‍ನ ತೀರದ ಎದುರಿಗೆ, ಕೌಲಿಗೆ ಅನುಗುಣವಾಗಿ ಯುಗೋಸ್ಲಾವಿಯದ ರಾಜ್ಯ ರಚನೆಯಾಯಿತು. ಇಟಲಿಯವರು ಫಿಯುಮ್ ಬಗ್ಗೆ ಒತ್ತಾಯ ಮಾಡಲಾರಂಭಿಸಿದರು. ಏಕೆಂದರೆ ಯುಗೋಸ್ಲಾವಿಯದವರು ಟ್ರಿಯೆಸ್ಟೆಯನ್ನು ನಾಶಪಡಿಸಲು ಫಿಯುಮ್ ಉಪಯೋಗಿಸಬಹುದೆಂಬ ಭಯವಿತ್ತು. ವರ್ಸೇಲ್ಸ್ ಒಪ್ಪಂದದಿಂದಲೂ ಈ ಸಮಸ್ಯೆ ಬಗೆಹರಿಯಲಿಲ್ಲ. 1919ರಲ್ಲಿ ಧೈರ್ಯವಂತನಾದ ಅನುಂಜಿನೊ ಕೆಲವು ಅನುಯಾಯಿಗಳೊಡನೆ, ತನ್ನ ಸರ್ಕಾರದ ಇಚ್ಛೆಯ ವಿರುದ್ಧ, ಫಿಯುಮ್ಮನ್ನು ವಶಪಡಿಸಿಕೊಂಡ. ಇಟಲಿ ಹಾಗೂ ಯುಗೋಸ್ಲಾವಿಯಗಳ ನಡುವಣ ಸಮಸ್ಯೆಗಳು 1920ರ ನವೆಂಬರಿನ ರಾಪಲೂ ಕರಾರಿನಿಂದ ಅಂತ್ಯಗೊಂಡುವು. ಇಟಲಿ ಟ್ರಿಯೆಸ್ಟೆಯ ಹಿನ್ನೆಲೆಪ್ರದೇಶವನ್ನೂ ಸಂಪೂರ್ಣ ಇಸ್ಟ್ರಿಯನ್ ಪರ್ಯಾಯದ್ವೀಪವನ್ನೂ ಪಡೆಯಿತು. ಫಿಯುಮ್ ಸ್ವತಂತ್ರ ನಗರವಾಯಿತು. ಮೂರು ವರ್ಷಗಳ ಅನಂತರ ಅದು ಇಟಲಿಗೆ ಸೇರಿತು. ಚೆರ್ಸೊದ್ವೀಪ ಹಾಗೂ ಜಾರಾ ಬಂದರನ್ನು ಪಡೆದರೂ ಡಾಲ್ಮೇಷಿಯದ ಬಗ್ಗೆ ಬೇಡಿಕೆಯನ್ನು ಇಟಲಿ ಬಿಟ್ಟಿತು. 

ಫ್ಯಾಸಿಸ್ಟ್ ನಿರಂಕುಶಾಧಿಕಾರ : ವರ್ಸೇಲ್ಸ್‍ನಲ್ಲಿ ಸಂಭವಿಸಿದ ಪರಾಭವದಿಂದಾಗಿ, ಆರ್ಲ್ಯಾಂಡೂ ಪದಚ್ಯುತನಾದ. 1920ರ ಜೂನ್ ವೇಳೆಗೆ ಗಿಯೊಲಿಟಿ ಮತ್ತೆ ಅಧಿಕಾರಕ್ಕೆ ಬಂದ. ನಿರಸನ ಮತ್ತು ಅವ್ಯವಸ್ಥೆ ಎಲ್ಲೆಲ್ಲೂ ಹಬ್ಬಿದ್ದುವು. ಪ್ರಜೆಗಳೆಲ್ಲ ತಮ್ಮ ದೃಷ್ಟಿಯನ್ನು ಸರ್ಕಾರದ ಕಡೆಗಲ್ಲದೆ ಮತ್ತೆಲ್ಲಿಯೋ ಬೀರಿದ್ದರು. ಅಂದರೆ ಒಂದು ಕಡೆ, ಆ ರಾಷ್ಟ್ರೀಯ ಭಾವನೆಗಳನ್ನು ಪ್ರತಿಪಾದಿಸುತ್ತಿದ್ದ ಸಿಂಡಿಕಲಿಸ್ಟರತ್ತ ಬಂಡಾಯಗಾರರತ್ತ ಮತ್ತು ಕಮ್ಯೂನಿಸ್ಟರತ್ತ ದೃಷ್ಟಿ ಬೀರಿದ್ದರೆ, ಮತ್ತೊಂದು ಕಡೆ ರಾಷ್ಟ್ರಸರ್ಕಾರವನ್ನು ವಶಪಡಿಸಿಕೊಂಡು ಹೊಸ ರಾಷ್ಟ್ರೀಯತಾವಾದದ ಭಾವನೆಗಳನ್ನು ಸ್ಥಾಪಿಸಬೇಕೆಂದಿದ್ದ ರಾಷ್ಟ್ರೀಯ ಸೆನೇಟಿನವರತ್ತಲೂ ಉಗ್ರ ರಾಷ್ಟ್ರೀಯವಾದಿಗಳತ್ತಲೂ ದೃಷ್ಟಿ ಬೀರಿದ್ದರು. ಈ ಎರಡನೆಯ ಗುಂಪಿನವರಲ್ಲಿ ಪ್ರಮುಖರಾಗಿದ್ದವರು ಡಿ ಅನುಂಜಿನೊ ಮತ್ತು ರಾಷ್ಟ್ರೀಯ ಸೆನೇಟಿನ ನಾಯಕ ರಸ್ಸೊನಿ. ಆದರೆ ಕ್ರಮೇಣ ತನ್ನದೇ ಆದ ಪಕ್ಷವನ್ನು ಸ್ಥಾಪಿಸಿದ್ಧ ಮುಸ್ಸೋಲಿನಿ 1919ರ ಮಾರ್ಚಿಯಲ್ಲಿ ಅಧಿಕಾರ ಗಳಿಸಿಕೊಂಡ. ಇವನ ಪಕ್ಷಕ್ಕೆ ಕಮ್ಯೂನಿಸ್ಟ್ ಹಾಗೂ ಅವರ ಸೋದರ ಪಂಗಡಗಳಷ್ಟು ಸಂಖ್ಯಾಬಲವಿರಲಿಲ್ಲ. 

ಮುಸ್ಸೋಲಿನಿ 1922ರ ಜನವರಿಯಲ್ಲಿ, ರಸ್ಸೊನಿ ಮತ್ತು ಅವನ ರಾಷ್ಟ್ರೀಯ ಸೆನೇಟಿನವರುಗಳನ್ನು ತನ್ನ ಫ್ಯಾಸಿಸ್ಟ್ ಪಂಗಡದವರೊಡನೆ ಸೇರಿಸಿಕೊಂಡಾಗ, ಆತ ಕಮ್ಯೂನಿಸ್ಟ್ ವಿರೋಧಿ ಹಾಗೂ ಪಾರ್ಲಿಮೆಂಟ್ ವಿರೋಧಿ ಚಳವಳಿಯ ಮೇಲೆ ಸಂಪೂರ್ಣವಾಗಿ ಹತೋಟಿ ಹೊಂದಿದ್ದ. ಏಕೆಂದರೆ ಯುಗೋಸ್ಲಾವಿಯದೊಡನೆ ರಾಪಲ್ಲೊ ಒಪ್ಪಂದದ ಮುಕ್ತಾಯದ ಅನಂತರ ಡಿ ಅನುಂಜಿನೊವನ್ನು ಗಿಯೊಲಿಟಿ ಫಿಯುಮ್‍ನಿಂದ ಹೊರಹಾಕಿದ್ದರಿಂದ, ಅನುಂಜಿನೊ ಗೌರವ ಕಡಿಮೆಯಾಗಿತ್ತು. ಮುಸ್ಸೋಲಿನಿಯ ತಂಡ ತಮ್ಮ ಲಾಠಿ ಹಾಗೂ ವ್ಯವಸ್ಥಿತ ಸಂಸ್ಥೆಗಳಿಂದಾಗಿ, ಪೋಲೀಸರ ಮಧ್ಯಪ್ರವೇಶವಿಲ್ಲದೆ ಎಡಪಂಗಡಗಳನ್ನು ಸೋಲಿಸಿದುವು. 1922ರ ಅಕ್ಟೋಬರಿನಲ್ಲಿ ರೋಮ್‍ನಗರದ ಸುತ್ತಲೂ ಬೀಡುಬಿಟ್ಟಾಗ ಅಲ್ಲಿನ ದೊರೆ ವಿಕ್ಟರ್ ಇಮಾನ್ಯುಯಲ್ ಈ ಫ್ಯಾಸಿಸ್ಟ್ ನಾಯಕನಿಗೆ ತನ್ನ ಸರ್ಕಾರದ ವ್ಯವಸ್ಥೆಯನ್ನು ಒಪ್ಪಿಸಲು ಸಮ್ಮತಿಸಿದ್ದ. ಆಗಿನ ಡೆಪ್ಯುಟಿಗಳ ಸಭೆಯಲ್ಲಿ ಆತನಿಗೆ 35 ಮಂದಿ ಫ್ಯಾಸಿಸ್ಟರ ಹಾಗೂ 10 ಮಂದಿ ರಾಷ್ಟ್ರೀಯತಾವಾದಿಗಳ ಬೆಂಬಲ ಮಾತ್ರ ದೊರಕಿತು. 

1922ರಿಂದ 1925ರ ವರೆಗಿನ ಕಾಲದಲ್ಲಿ ಅನೇಕ ರಾಜಾಜ್ಞೆಗಳನ್ನು ಹೊರಡಿಸಿ ಫ್ಯಾಸಿಸ್ಟ್ ಸರ್ವಾಧಿಕಾರವನ್ನು ಮುಸ್ಸೋಲಿನಿ ಸ್ಥಾಪಿಸಿದ. ಕಾರ್ಯಾಂಗ ರಾಜನಿಗೆ ಮಾತ್ರ ಜವಾಬ್ದಾರಿಯಾಗಿರಬೇಕೆಂದೂ ಪಾರ್ಲಿಮೆಂಟಿಗಲ್ಲವೆಂದೂ ನಿಬಂಧನೆಯಾಯಿತು. ಮೊದಮೊದಲು ಹೆದರಿಕೆಯಿಂದಲೂ ಬೇರೆ ಯಾವ ಮಾರ್ಗವೂ ತೋರದ್ದರಿಂದಲೂ ಸೆನೆಟ್ ಮತ್ತು ಡೆಪ್ಯುಟಿಗಳ ಚೇಂಬರ್‍ಗಳು ಈ ತೀರ್ಮಾನಕ್ಕೆ ಒಪ್ಪಿಗೆ ನೀಡಿದುವು. 1924ರ ಅನಂತರ, ಚುನಾವಣೆಯ ವಿಧಾನಗಳಲ್ಲಿ ಮಾಡಿದ ಕೆಲವೊಂದು ಮಾರ್ಪಾಡುಗಳಿಂದಾಗಿ ಪಾರ್ಲಿಮೆಂಟು ಫ್ಯಾಸಿಸ್ಟರಿಂದ ತುಂಬಿತು. 1924ರ ಜೂನಿನಲ್ಲಿ ಕೊಲೆಯಾದ ಮಾಟ್ಟಿಯೊಟ್ಟಿ ಮತ್ತು ಇತರ ಹಲವು ರಾಜಕಾರಣಿಗಳು ಮುಸ್ಸೋಲಿನಿಯನ್ನು ಬಹಿರಂಗವಾಗಿ ವಿರೋಧಿಸಿದರು. ಆದರೆ ಪಾರ್ಲಿಮೆಂಟ್ ಸಂಪೂರ್ಣವಾಗಿ ಅವನ ಅಧೀನದಲ್ಲಿತ್ತು. ಈ ರೀತಿಯಲ್ಲಿ ಮುಸ್ಸೋಲಿನಿ ಯಾರನ್ನೂ ಹತ್ತಿಕ್ಕದೆ, ಭಾಗಶಃ ಪಾರ್ಲಿಮೆಂಟಿನ ಸಹಕಾರದಿಂದಲೂ ಭಾಗಶಃ ರಾಜನ ಮೈತ್ರಿಯ ಒಪ್ಪಿಗೆಯ ಆಧಾರದಿಂದಲೂ ತನ್ನ ಅಧಿಕಾರ ಸ್ಥಾಪಿಸಿದ. ಇವೆರಡರ ಮೇಲೂ ಆತನ ಹಿಡಿತ ಬಲವಾಗಿತ್ತು.

ಮುಸ್ಸೋಲಿನಿಯ ನಾಯಕತ್ವದಲ್ಲಿ ಆತನ ಪಕ್ಷ ರಾಜ್ಯದ ನಿಜವಾದ ಆಳುವ ಪಕ್ಷವಾಯಿತು. 

ಮುಸ್ಸೋಲಿನಿಯ ತಂತ್ರದಿಂದ ಇಡೀ ಇಟಲಿಯೇ ಸೈನಿಕ ಉಡುಪು ಧರಿಸಿದ ರಾಷ್ಟ್ರವಾಗಿ ಪರಿಣಮಿಸಿತು. ಆತ ಸ್ವತಂತ್ರ ಕಾರ್ಮಿಕ ಸಂಘಗಳನ್ನು ಮಟ್ಟ ಹಾಕಿದ. ಫ್ಯಾಸಿಸ್ಟ್ ಕೈಗಾರಿಕೆಗಾರರ ಸಿಂಟಿಕೇಟಿನವರು ಮಾತ್ರ ಕಾರ್ಮಿಕರ ನಿಜವಾದ ಪ್ರತಿನಿಧಿಗಳೆಂದು ಮನ್ನಣೆ ನೀಡಲಾಯಿತು. ಕೆಲವು ವಿರೋಧಿಗಳಿಗೆ ಕಿರುಕುಳ ಕೊಡಲಾಯಿತು. ಮತ್ತೆ ಕೆಲವರನ್ನು ಗಡೀಪಾರು ಮಾಡಲಾಯಿತು. ಇನ್ನೂ ಕೆಲವರ ಬಾಯಿ ಮುಚ್ಚಿಸಲಾಯಿತು. ಮುಸ್ಸೋಲಿನಿಯ ಆಡಳಿತಕ್ಕೆ ಹೆಚ್ಚು ಹೆಚ್ಚು ಬೆಂಬಲ ದೊರಕಿತು. ಬಹು ಹಿಂದಿನ ಕಾಲದಿಂದ ಜನರಿಗೆ ಯಾವ ಯಾವ ಸೌಲಭ್ಯಗಳು ದೊರಕಿರಲಿಲ್ಲವೋ ಅವನ್ನು ಆತ ಸಮಯೋಚಿತವಾಗಿ ನೀಡಿ ಹಲವರ ಮನಸ್ಸು ಗೆದ್ದ. 1929ರಲ್ಲಿ ಚರ್ಚಿನೊಡನೆ ಈತ ಮಾಡಿಕೊಂಡ ಒಪ್ಪಂದ ಮುಖ್ಯವಾದದ್ದು. ಇದರ ಪ್ರಕಾರ ವ್ಯಾಟಿಕನ್ ನಗರದ ಸಂಪೂರ್ಣ ಸಾರ್ವಭೌಮತ್ವವನ್ನು ಪೋಪ್‍ಗೆ ನೀಡಲಾಯಿತು. ಚರ್ಚಿನ ಆಸ್ತಿಗೆ ಸಾಕಷ್ಟು ರಕ್ಷಣೆ ನೀಡಲಾಗಿತ್ತಾದರೂ ವಿದ್ಯಾಭ್ಯಾಸದ ಮೇಲೆ ಸರ್ಕಾರವೇ ಹತೋಟಿ ಹೊಂದಿತ್ತು. ಈ ರೀತಿಯಲ್ಲಿ ಇಟಲಿಯವರಿಗೆ ಅಸ್ವಾಭಾವಿಕವಾಗಿದ್ದ ಹಾಗೂ ರಾಜ್ಯವನ್ನು ದುರ್ಬಲಗೊಳಿಸುವ ಕಲಹವೊಂದು ಅಂತ್ಯಗೊಂಡಿತು. ಆದರೆ ಇವೆಲ್ಲಕ್ಕೂ ಮಿಗಿಲಾಗಿ, ಮುಸ್ಸೋಲಿನಿ ಇಟಲಿಯ ಜನಕ್ಕೆ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ಹೆಮ್ಮೆಯೇನೆಂಬುದನ್ನು ಮನವರಿಕೆ ಮಾಡಿಸಿಕೊಟ್ಟ. ಯಾವ ಜನಾಂಗದವರ ಇತಿಹಾಸ ರಾಜಕೀಯ ತೇಜೋವಧೆಯಿಂದ ಕೂಡಿತ್ತೋ ಆ ಜನರಿಗೆ ಒಂದು ರೀತಿಯ ಆಶ್ವಾಸನೆ ದೊರಕಿತು. ಈತನ ಬಡಾಯಿ ನಾಯಕತ್ವವೂ ಧೈರ್ಯ ಸ್ಥೈರ್ಯಗಳ ಯೋಜನೆಗಳೂ ರೈಲ್ವೆಗಳ ವಿದ್ಯುತ್ಕರಣವೂ ಪರಿಣಾಮಕಾರಿಯಾಗಿದ್ದುವು. ಈ ಉಕ್ಕಿನ ಚೌಕಟ್ಟಿನ ವ್ಯವಸ್ಥೆಗೆ ಇಟಲಿಯ ಪ್ರಜಾಸ್ವಾತಂತ್ರ್ಯವೇ ಪಣವಾಯಿತು. ಈ ಆಡಳಿತ ಪಾಶ್ಚಾತ್ಯ ಧನಿಕವರ್ಗದ ಆಡಳಿತದತ್ತ ತಿರಸ್ಕಾರ ಭಾವದಿಂದ ನೋಡಿತು.

ಫ್ಯಾಸಿಸ್ಟರ ವಿದೇಶಾಂಗ ನೀತಿ : ಗೌರವ ಹಾಗೂ ನೀತಿಗಳ ಮುಂದಾಲೋಚನೆಯಿಂದ ಕೂಡಿದ್ದ ಮುಸ್ಸೋಲಿನಿಯ ಸರ್ಕಾರ ಆರಂಭದಿಂದಲೂ ಕ್ರಿಯಾತ್ಮಕ ವಿದೇಶಾಂಗ ನೀತಿಯನ್ನು ಅನುಸರಿಸಿತು. ಗ್ರೀಕೊ-ಆಲ್ಬೇನಿಯನ್ ಗಡಿಯಲ್ಲಿ ಇಟಲಿಯ ಸೇನಾನಿಯೊಬ್ಬನ ಕೊಲೆಯಾದಾಗ, ಇಟಲಿಯವರು ದಾಳಿ ಮಾಡಿದರು; ಮತ್ತು ರಾಷ್ಟ್ರಕೂಟದ (ಲೀಗ್ ಆಫ್ ನೇಷನ್ಸ್) ಒಪ್ಪಿಗೆಯಿಲ್ಲದಿದ್ದರೂ ಒಂದು ಗ್ರೀಕ್ ದ್ವೀಪವನ್ನೂ ವಶಮಾಡಿಕೊಂಡರು. ಮುಂದಿನ ಕೆಲವು ವರ್ಷಗಳಲ್ಲಿ ಈ ರೀತಿಯ ಅನೇಕ ಘಟನೆಗಳು ನಡೆದುವು. ಸಣ್ಣ ರಾಷ್ಟ್ರಗಳ ಗುಂಪಿನ ಯಾಜಮಾನ್ಯ ವಹಿಸಲು ಇಟಲಿ ಮುಂದಾಯಿತು; ಫ್ರೆಂಚರೊಡನೆ ಪೈಪೋಟಿ ಹೂಡಿತು. ಈ ಸಣ್ಣ ಸ್ನೇಹ ರಾಜ್ಯಗಳಲ್ಲಿ ಹಂಗೆರಿ, ಬಲ್ಗೇರಿಯ, ಆಸ್ಟ್ರಿಯ-ಇವು ಸೇರಿದ್ದುವು. ಈ ರಾಷ್ಟ್ರಗಳು ಇಟಲಿಯಂತೆಯೇ ವರ್ಸೇಲ್ಸ್ ಒಪ್ಪಂದವನ್ನು ಮಾರ್ಪಡಿಸಲು ಇಚ್ಛಪಟ್ಟಿದುವು. ನಿಶ್ಯಸ್ತ್ರೀಕರಣ ಚಳವಳಿಗೆ ಬೆಂಬಲ ನೀಡುತ್ತ, ಇಟಲಿ ಈ ರಾಷ್ಟ್ರಗಳಿಗೂ ಜರ್ಮನಿಯ ನಾಜಿಗಳಿಗೂ ಶಸ್ತ್ರಗಳನ್ನು ಸರಬರಾಜು ಮಾಡಿತು. 1933ರ ಜನವರಿಯಲ್ಲಿ ಹಿಟ್ಲರ್ ಅಧಿಕಾರ ಪಡೆದಾಗ, ಮುಸ್ಸೋಲಿನಿಯ ಶಕ್ತಿ ಮತ್ತಷ್ಟು ಅಧಿಕವಾಯಿತು. ರಾಷ್ಟ್ರಕೂಟದ ಸಹಸದಸ್ಯ ರಾಷ್ಟ್ರವೊಂದಾದ ಅಬಿಸೀನಿಯದ ಮೇಲೆ ಇಟಲಿ ದಾಳಿಮಾಡಿತು. ತತ್ಪರಿಣಾಮವಾಗಿ, ಗ್ರೇಟ್‍ಬ್ರಿಟನ್ನಿನ ನಾಯಕತ್ವದಲ್ಲಿ ರಾಷ್ಟ್ರಕೂಟದ ನಲವತ್ತೈದು ರಾಷ್ಟ್ರಗಳು ನವೆಂಬರ್ 18 ರಂದು ಇಟಲಿಯ ಮೇಲೆ ಆರ್ಥಿಕ ಕ್ರಮ ಕೈಕೊಳ್ಳಲು ಮತ ನೀಡಿದುವಾದರೂ ತೈಲಸರಬರಾಜನ್ನು ನಿಲ್ಲಿಸುವ ಹಾಗೂ ಯಾವುದೇ ರೀತಿಯ ಸೈನಿಕ ದಂಡನೆಯ ಕ್ರಮ ಕೈಗೊಳ್ಳಲಿಲ್ಲ. ದಾಳಿಯ ನಾಯಕತ್ವ ವಹಿಸಿದ್ದ ಮಾರ್ಷಲ್ ಬಡೋಗ್ಲಿಯಾ ನೇತೃತ್ವದಲ್ಲಿ 1936ರ ಮೇ 5ನೆಯ ದಿನದಂದು ಇಟಲಿಯ ಸೈನ್ಯ ಅಬಿಸೀನಿಯದ ಆಡಿಸ್‍ಅಬಾಬ ಪ್ರವೇಶಿಸಿತು. ಮೇ 9ರಂದು ಅಮಿತೋತ್ಸಾಹಗಳ ನಡುವೆ ಮುಸ್ಸೋಲಿನಿ ಹೊಸ ಸಾಮ್ರಾಜ್ಯದ ಘೋಷಣೆ ಹೊರಡಿಸಿದ, ಮುಂದಿನ ಕೆಲವು ತಿಂಗಳುಗಳಲ್ಲಿ ರಾಷ್ಟ್ರಕೂಟ ಅನುಮೋದನೆ ನೀಡಿತು.

ಇದೇ ವರ್ಷ ಆಗಸ್ಟ್ ತಿಂಗಳಿನಲ್ಲಿ ಇಟಲಿಯ ಫ್ಯಾಸಿಸ್ಟ್ ಸರ್ಕಾರ ಸ್ಪೇನಿನ ಅಂತರ್ಯುದ್ಧದಲ್ಲಿ ಜನರಲ್ ಫ್ರಾಂಕೂ ಪರವಾಗಿ ಪ್ರವೇಶಿಸಿತು. ಈ ವೇಳೆಗೆ, ಪಾಶ್ಚಾತ್ಯ ರಾಷ್ಟ್ರಗಳ ಹಾಗೂ ಲೀಗಿನ ವಿರುದ್ಧ ಮುಸ್ಸೋಲಿನಿಯ ವಿಜಯದಿಂದ ಪ್ರೇರಿತನಾಗಿದ್ದ ಹಿಟ್ಲರ್ ರ್ಹೈನ್ ಲ್ಯಾಂಡ್ ವಶಮಾಡಿಕೊಂಡ, ಬರ್ಲಿನ್-ರೋಮ್‍ಗಳ ನಡುವಣ ಅಕ್ಷರೇಖೆ ವಾಸ್ತವವಾಯಿತಲ್ಲದೆ ಎರಡೂ ರಾಷ್ಟ್ರಗಳ ನಿರಂಕುಶಾಧಿಕಾರಿಗಳ ಹಾಗೂ ಅವರ ವಿದೇಶಾಂಗ ಮಂತ್ರಿಗಳ ಪರಸ್ಪರ ಭೇಟಿ ಸಂಧಾನಗಳು ಯೂರೋಪಿನಲ್ಲಿ ಆರಂಭವಾದುವು. ಸ್ಪೇನ್ ಯುದ್ಧ ಮುಂದುವರಿಯಿತು. ಇಟಲಿ ತನ್ನ ಸರ್ಕಾರ ಎಷ್ಟು ವೆಚ್ಚ ಮಾಡಲೆಂದಿತ್ತೋ ಮತ್ತು ಸಾಮಥ್ರ್ಯವೆಷ್ಟಿತ್ತೋ ಅದಕ್ಕೂ ಮೀರಿ ಖರ್ಚು ಮಾಡುತ್ತಿತ್ತು. ಅಲ್ಲದೆ ಇದರ ರಾಯಭಾರ ಸಂಬಂಧ ಅಪಾಯಕರ ಪರಿಸ್ಥಿತಿಯಲ್ಲಿತ್ತು. 
ಮಹಾಯುದ್ಧವೊಂದು ಸನ್ನಿಹಿತವಾಗಿತ್ತು. ತನ್ನ ದೇಶದ ದೌರ್ಬಲ್ಯವನ್ನರಿತ್ತಿದ್ದ ಮುಸ್ಸೋಲಿನಿ, 1938ರ ಅಕ್ಟೋಬರಿನಲ್ಲಿ ಹಾಗೂ ಅನಂತರ ಹಿಟ್ಲರನ ಕೈ ತಡೆಯಲು ಪ್ರಯತ್ನಿಸಿದ್ದ. 1939ರ ಸೆಪ್ಟೆಂಬರಿನಲ್ಲಿ ದ್ವೀತಿಯ ಮಹಾಯುದ್ಧ ಆರಂಭವಾದಾಗ, ಇಟಲಿ ಜರ್ಮನಿಗೆ ಸೈನಿಕ ರೀತಿಯದಲ್ಲದ ನೆರವಿನ ಬಗ್ಗೆ ಆಶ್ವಾಸನೆ ನೀಡಿದರೂ ತಾನು ಯುದ್ಧನಿರತವಲ್ಲದ ರಾಷ್ಟ್ರವೆಂದು ಸಾರಿಕೊಂಡಿತು. ಜರ್ಮನರ ಆಕ್ರಮಣ ತಕ್ಕಮಟ್ಟಿಗೆ ಮುಂದುವರಿಯುವ ವರೆಗೂ ಮುಸ್ಸೋಲಿನಿ ಇದೇ ಧೋರಣೆಯನ್ನೇ ಕಾಪಾಡಿಕೊಂಡು ಬಂದ. 1940ರ ಜೂನ್ ವರೆಗೂ ಆತ ಯುದ್ಧ ಘೋಷಿಸಲಿಲ್ಲ. ಜೂನ್ 24ರಂದು ಫ್ರಾನ್ಸ್ ಇಟಲಿಗಳ ನಡುವೆ ಒಂದು ತಾತ್ಕಾಲಿಕ ಸಂಧಿಗೆ ಸಹಿ ಹಾಕಲಾಯಿತು. ಇದರಿಂದ ಇಟಲಿಗೆ ಬಹಳ ಹಿಂದಿನಿಂದಲೂ ವಾದಗ್ರಸ್ತವಾಗಿದ್ದ ಸವಾಯ್‍ನ ಭಾಗಗಳು ದೊರೆತುವು. ಆದರೆ ಈ ರಕ್ತರಹಿತ ಸ್ಥಿತಿ ಬಹಳ ಸ್ವಲ್ಪ ಕಾಲವಷ್ಟೇ ಮುಂದುವರಿಯಿತು. ಏಕೆಂದರೆ, ಮುಂದಿನ ಮೂರು ವರ್ಷಗಳಲ್ಲಿ, ಇದಕ್ಕೆ ಅಭೂತಪೂರ್ವವಾದ ಪರಾಭವವಾಯಿತು. 1940ರ ನವೆಂಬರಿನಲ್ಲಿ ಅದರ ಯುದ್ಧನೌಕೆಗಳು ಟೊರಂಟೊದಲ್ಲಿ ನಷ್ಟವನ್ನನುಭವಿಸಿದುವು. ದಾಳಿ ಮಾಡುತ್ತಿದ್ದ ಸೈನ್ಯಗಳು ಡಿಸೆಂಬರಿನಲ್ಲಿ ಈಜಿಪ್ಟಿನಿಂದ ಹಿಂದಿರುಗಿದವು. ಗ್ರೀಸಿನಲ್ಲಿ ದಾಳಿಕಾರ ಸೈನ್ಯವನ್ನು ಮಿತ್ರರಾಷ್ಟ್ರಗಳವರು ತಡೆದು ಆಲ್ಬೇನಿಯಕ್ಕೆ ಹಿಂದಿರುಗುವಂತೆ ಮಾಡಿದರು. ಅಲ್ಲಿಂದ ಮುಂದೆ ಇಟಲಿಯವರು ಆಫ್ರಿಕದಲ್ಲೂ ಗ್ರೀಸ್, ರಷ್ಯಗಳಲ್ಲೂ ಜರ್ಮನ್ ನಾಯಕತ್ವದಲ್ಲಿ ಹೋರಾಡಿದರು. ಕೆಲವು ವಿಜಯಗಳನ್ನೇನೋ ಸಾಧಿಸಿದರು. ಆದರೆ 1943ರ ಬೇಸಗೆಯ ವೇಳೆಗೆ ಬ್ರಿಟಿಷ್ ಮತ್ತು ಅಮೆರಿಕನ್ ಸೇನೆಗಳು ಉತ್ತರ ಆಫ್ರಿಕವನ್ನು ವಶಪಡಿಸಿಕೊಂಡಿದ್ದುವು. ಜುಲೈನಲ್ಲಿ ಸಿಸಿಲಿ ಅವುಗಳ ವಶವಾಯಿತು. ಈ ಸೋಲಿನಿಂದ ಮುಸ್ಸೋಲಿನಿ ರಾಜೀನಾಮೆ ಸಲ್ಲಿಸಿದ. ರಾಜನ ನೇತೃತ್ವದಲ್ಲಿ ಮಾರ್ಷಲ್ ಬಡೋಗ್ಲಿಯೊಗೆ ಆಡಳಿತದ ವರ್ಗಾವಣೆಯಾಯಿತು. ಸೆಪ್ಟೆಂಬರ್ 3 ರಂದು ಯುದ್ಧ ವಿಶ್ರಾಂತಿಗೆ ಸಹಿ ಹಾಕಲಾಯಿತು. ಇಟಲಿಯವರು ಮಿತ್ರರಾಷ್ಟ್ರಗಳೊಡನೆ ಜರ್ಮನಿಯ ವಿರುದ್ಧವಾಗಿ ಕಾದಾಡಲಾರಂಭಿಸಿದರು. ಉತ್ತರದಲ್ಲಿ ಆಂಗ್ಲೊ-ಅಮೆರಿಕನ್ ಸೇನೆಗಳೊಂದಿಗೆ ಸೇರಿ ಜರ್ಮನರನ್ನೆದುರಿಸಿ ಭಯಂಕರವಾಗಿ ಹೋರಾಡಿದರು. ಜರ್ಮನಿಯ ವಿರುದ್ಧ ಶತ್ರುತ್ವ ಕಟ್ಟಿಕೊಂಡಿದ್ದಕ್ಕೆ ಸರಿಯಾಗಿ ಒಂದು ವರ್ಷದ ಅನಂತರ, ಜನಮತಾಭಿಪ್ರಾಯದ ಫಲಿತಾಂಶದ ಪ್ರಕಾರ ದಕ್ಷಿಣದಲ್ಲಿ ಬಲವಾದ ಬೆಂಬಲವಿದ್ದರೂ ರಾಜಪ್ರಭುತ್ವ ನಿಷೇಧಿಸಲ್ಪಟ್ಟಿತು. ಹೊಸ ಗಣರಾಜ್ಯದ ಸಂವಿಧಾನ. 1947ರ ಡಿಸೆಂಬರಿನಲ್ಲಿ ರಾಷ್ಟ್ರಪ್ರತಿನಿಧಿಗಳ ಅಂಗೀಕಾರಪಡೆದು 1948ರ ಜನವರಿ 1ರಿಂದ ಜಾರಿಗೆ ಬಂತು. ಇಟಲಿ ಗಣರಾಜ್ಯವಾಯಿತು. 
ಕ್ರಿಶ್ಚಿಯನ್ ಡೆಮೋಕ್ರ್ಯಾಟ್ ಆದ ಡಿ ಗಾಸ್ಪೆರಿಯ ನೇತೃತ್ವದಲ್ಲಿ, 1947ರ ತಿಂಗಳಲ್ಲಿ ಕಮ್ಯೂನಿಸ್ಟ್ ಹಾಗೂ ವಾಮವಾದಿ ಸಮಾಜವಾದಿಗಳನ್ನು ಸಂಯುಕ್ತ ಸರ್ಕಾರದಿಂದ ಹೊರಹಾಕಲಾಯಿತು. 1948ರ ಚುನಾವಣೆಗಳಲ್ಲಿ ಕ್ರಿಶ್ಚಿಯನ್ ಡೆಮೋಕ್ರ್ಯಾಟರು ಮತ್ತಷ್ಟು ಪ್ರಬಲರಾದರು. ಆದರೆ 1953ರ ಚುನಾವಣೆಗಳಲ್ಲಿ ನಿಚ್ಚಳ ಬಹುಮತ ಪಡೆಯದಿದ್ದುದರಿಂದ ಡಿ ಗಾಸ್ಪೆರಿ ರಾಜಿನಾಮೆ ನೀಡಿದ. ಭದ್ರ ಸರ್ಕಾರ ರಚಿಸುವುದೊಂದು ದೊಡ್ಡ ಸಮಸ್ಯೆಯಾಯಿತು.

	1947ನೆಯ ಫೆಬ್ರವರಿ 10ರಂದು ಸಹಿ ಹಾಕಲಾದ ಒಪ್ಪಂದದ ಪ್ರಕಾರ, ಫ್ರಾನ್ಸ್ ಪರವಾಗಿ ಕೆಲವು ಸಣ್ಣಪುಟ್ಟ ಬದಲಾವಣೆಗಳಾದುವು. ಟ್ರಿಯಸ್ಟೆ ಹಾಗೂ ಅದರ ಹಿಂದಿನ ಭೂಮಿಯನ್ನು ಸ್ವತಂತ್ರ ಪ್ರಾಂತ್ಯವಾಗಿ ಸ್ಥಾಪಿಸುವುದು, ಎಲ್ಲ ವಸಾಹತುಗಳ ವಿಸರ್ಜನೆ, ಸೋವಿಯತ್ ರಷ್ಯ, ಯುಗೋಸ್ಲಾವಿಯ, ಗ್ರೀಸ್, ಆಲ್ಬೇನಿಯ, ಇಥಿಯೋಪಿಯಗಳಿಗೆ ಯುದ್ಧ ಪರಿಹಾರ ನೀಡಿಕೆ-ಇವುಗಳ ಬಗ್ಗೆ ಒಪ್ಪಂದವಾಯಿತು. 1950ರ ಡಿಸೆಂಬರಿನಲ್ಲಿ ವಿಶ್ವರಾಷ್ಟ್ರ ಸಂಸ್ಥೆಯ ನ್ಯಾಸಾಧಿಕಾರ ಒಪ್ಪಂದದ ಪ್ರಕಾರ ಇಟಲಿ ಹತ್ತು ವರ್ಷಗಳ ಅವಧಿಯವರೆಗೆ ಸೋಮಾಲಿಯದ ಮೇಲೆ ನ್ಯಾಸಾಧಿಕಾರ ಹೊಂದಿತು. ಈ ಅವಧಿ ಪೂರೈಸಿದಾಗ ಅದೂ ಸಂಪೂರ್ಣ ಸ್ವತಂತ್ರವಾಯಿತು. 

1947ರ ಡಿಸೆಂಬರಿನಲ್ಲಿ ಬ್ರಿಟಿಷ್ ಅಮೆರಿಕಗಳ ಕೊನೆಯ ಸೇನಾ ತುಕಡಿಗಳು ಇಟಲಿಯಿಂದ ನಿರ್ಗಮಿಸಿದುವು. 1949ರಲ್ಲಿ ಇಟಲಿ ನ್ಯಾಟೋದ ಸದಸ್ಯರಾಷ್ಟ್ರವಾಯಿತಲ್ಲದೆ ಯೂರೋಪ್ ಸಭೆ ಸೇರಿತು. ಅನಂತರದ ವರ್ಷಗಳಲ್ಲಿ ಪಶ್ಚಿಮ ಯೂರೋಪಿನ ಆರ್ಥಿಕ ಹಾಗೂ ಸೇನಾ ಏಕೀಕರಣಕ್ಕಾಗಿ ನೇಮಿಸಲಾದ ಅನೇಕ ಸಂಸ್ಥೆಗಳಲ್ಲಿ ಇಟಲಿ ಭಾಗವಹಿಸಿತಾದರೂ ಸೋವಿಯತ್ ರಾಜ್ಯದ ಅಭಿಷೇಧದಿಂದಾಗಿ (ವಿಟೊ) ಇದಕ್ಕೆ ವಿಶ್ವಸಂಸ್ಥೆಯ ಸದಸ್ಯತ್ವ ದೊರಕಲಿಲ್ಲ. 		
(ಬಿ.ಎಸ್.ಆರ್.ಆರ್.; ಎನ್.ಎಸ್.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ